ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿದ್ದರೂ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಇನ್ನೂ ತಣ್ಣಗಾಗಿಲ್ಲ. ಸಚಿವ ಸ್ಥಾನ ಕೈತಪ್ಪಿದ ಹಿರಿಯ ಶಾಸಕರ ಅಸಮಾಧಾನ ಮುಂದುವರಿದಿದ್ದು, ಪಕ್ಷದ ಹೈಕಮಾಂಡ್ ನಡೆಸುತ್ತಿರುವ ಸಮಾಧಾನದ ಪ್ರಯತ್ನಗಳಿಗೂ ಕೆಲ ನಾಯಕರು ಮಣಿಯದಿರುವುದು ಕಾಂಗ್ರೆಸ್‌ಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ವಿಜಯನಗರ ಕ್ಷೇತ್ರದ ಹಿರಿಯ ಶಾಸಕ ಎಂ. ಕೃಷ್ಣಪ್ಪ ಅವರು ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನವನ್ನು ಮುಂದುವರಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಮಾತುಕತೆ ನಡೆಸಿದರೂ ಅವರು ಸಮಾಧಾನಗೊಂಡಿಲ್ಲ ಎನ್ನಲಾಗಿದೆ.
ಇದರ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೇರವಾಗಿ ಎಂ. ಕೃಷ್ಣಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ, ರಾಹುಲ್ ಗಾಂಧಿಯವರ ಮನವಿಗೂ ಎಂ. ಕೃಷ್ಣಪ್ಪ ತಮ್ಮ ನಿಲುವು ಬದಲಿಸಿಲ್ಲ ಎನ್ನಲಾಗಿದ್ದು, “ನೀಡಿದರೆ ಸಚಿವ ಸ್ಥಾನವೇ ನೀಡಿ, ಇಲ್ಲದಿದ್ದರೆ ಬೇರೆ ಯಾವುದೇ ಹುದ್ದೆ ಬೇಡ” ಎಂದು ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ವೇಳೆ ಎಂ. ಕೃಷ್ಣಪ್ಪ ಅವರ ಪುತ್ರ ಹಾಗೂ ಮಾಜಿ ಶಾಸಕ ಪ್ರಿಯಕೃಷ್ಣ ದೆಹಲಿಗೆ ತೆರಳಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಈ ಭೇಟಿಯಲ್ಲಿ ಸಚಿವ ಸ್ಥಾನ ಸೇರಿದಂತೆ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿದೆ.
ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿದ್ದರೂ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸಂಪೂರ್ಣವಾಗಿ ಬಗೆಹರಿದಿಲ್ಲ. ಹಿರಿಯ ಶಾಸಕರ ಅಸಮಾಧಾನ ಶಮನಗೊಳಿಸಲು ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವ ನಿರಂತರ ಪ್ರಯತ್ನ ನಡೆಸುತ್ತಿದ್ದರೂ, ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ ಎನ್ನುವುದು ಪಕ್ಷದೊಳಗಿನ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ.
ಇದನ್ನೂ ಓದಿ : ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್ ಆಕ್ರೋಶ.. ಹೈಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ!



















