ಕಬ್ಬು ಬೆಳೆಗಾರರು ಇಂದು ನೀಡಿರುವ ರಾಜ್ಯ ಬಂದ್ ಕರೆ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಸಕ್ಕರೆ ಸಚಿವರ ನಿವಾಸದ ಮುಂದೆ ರೈತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ನೇತಾಜಿ ನಗರದಲ್ಲಿರುವ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ನಿವಾಸದ ಮುಂದೆ ಜಿಲ್ಲೆಯ ರೈತರು ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸಚಿವರ ಮನೆ ಸುತ್ತಮುತ್ತ ಭಾರೀ ಖಾಕಿ ಪಡೆ ನಿಯೋಜಿಸಲಾಗಿದೆ. ಸಚಿವರ ನಿವಾಸವನ್ನು ಸಂಪರ್ಕಿಸುವ ಎರಡೂ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿರುವ ಪೊಲೀಸರು ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ.


















