ಬೆಂಗಳೂರು : ಖಾಸಗಿ ಶಾಲೆಗಳ ಹಾವಳಿ, ಲಾಬಿಯಿಂದಾಗಿ ರಾಜ್ಯದಲ್ಲಿ ಶಿಕ್ಷಣದ ವೆಚ್ಚವು ದುಬಾರಿಯಾಗಿದೆ. ಬಡವರು, ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಕಷ್ಟಸಾಧ್ಯವಾಗಿದೆ. ಇದನ್ನು ಮನಗಂಡ ರಾಜ್ಯ ಸರ್ಕಾರವು ರಾಜ್ಯದ ಕಾರ್ಮಿಕರ ಮಕ್ಕಳಿಗಾಗಿ “ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರೋತ್ಸಾಹಧನ” ಘೋಷಣೆ ಮಾಡಿದೆ. ಇದರ ಅನ್ವಯ ರಾಜ್ಯದ ಕಾರ್ಮಿಕರ ಮಕ್ಕಳಿಗೆ 25 ಸಾವಿರ ರೂಪಾಯಿವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಗೆ ನೀಡುತ್ತಿರುವ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಯ ಪೋಷಕರ ಮಾಸಿಕ ಆದಾಯವು 35 ಸಾವಿರ ರೂಪಾಯಿ ಮೀರಿರಬಾರದು. ಕಳೆದ ವರ್ಷದ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದವರು ಕನಿಷ್ಠ ಶೇ.50ರಷ್ಟು ಮತ್ತು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಶೇ.45ರಷ್ಟು ಅಂಕ ಪಡೆದಿರಬೇಕು. ಒಂದು ಕುಟುಂಬದಲ್ಲಿ ಇಬ್ಬರಿಗೆ ಸ್ಕಾಲರ್ ಶಿಪ್ ನೀಡಲಾಗುತ್ತದೆ.
ಯಾರಿಗೆ ಎಷ್ಟು ವಿದ್ಯಾರ್ಥಿ ವೇತನ?
8ನೇ ತರಗತಿಯಿಂದ 10ನೇ ತರಗತಿ ಓದುತ್ತಿರುವವರಿಗೆ 6 ಸಾವಿರ ರೂ., ಪಿಯುಸಿ, ಐಟಿಐ, ಡಿಪ್ಲೋಮಾ ಓದುತ್ತಿರುವವರಿಗೆ 8 ಸಾವಿರ ರೂ., ಪದವಿ ಅಧ್ಯಯನ ಮಾಡುತ್ತಿರುವವರಿಗೆ 10 ಸಾವಿರ ರೂ., ಪೋಸ್ಟ್ ಗ್ರಾಜುಯೇಷನ್ ಮಾಡುತ್ತಿರುವವರಿಗೆ 12 ಸಾವಿರ ರೂ. ಹಾಗೂ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಓದುತ್ತಿರುವವರಿಗೆ 20 ಸಾವಿರ ರೂಪಾಯಿ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಕೆಲವೊಮ್ಮೆ 25 ಸಾವಿರ ರೂಪಾಯಿವರೆಗೂ ಸ್ಕಾಲರ್ ಶಿಪ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಬಯಸುವವರು http://klwbapps.karnataka.gov.in/ ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕಾರ್ಮಿಕ ಕಲ್ಯಾಣ ಮಂಡಳಿ ಸಹಾಯವಾಣಿ ಸಂಖ್ಯೆ 8277291175, 8277120505 ಗೆ ಕರೆ ಮಾಡಬಹುದಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಹಿಂದಿನ ವರ್ಷದ ಅಂಕಪಟ್ಟಿ, ತಂದೆ ಅಥವಾ ತಾಯಿ ಕೆಲಸ ಮಾಡುತ್ತಿರುವ ಕಂಪನಿಯ ವಿವರಗಳನ್ನು ನೀಡಬೇಕಾಗುತ್ತದೆ.
ಇದನ್ನೂ ಓದಿ : ‘ಮಾರ್ಕ್’ಗೆ ಪೈರಸಿ ಕಾಟ | ಕಿಚ್ಚ ಸುದೀಪ್ ಡಿಲೀಟ್ ಮಾಡಿಸಿದ ಲಿಂಕ್ ಎಷ್ಟು ಗೊತ್ತಾ?


















