ಬೆಂಗಳೂರು : ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ‘ಜನಿವಾರ’ (ಪವಿತ್ರ ದಾರ) ತೆಗೆದ ಬಳಿಕವೇ ಪರೀಕ್ಷೆಗೆ ಅವಕಾಶ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಬೆಳವಣಿಗೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಕಡೆಗಳಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಜನಿವಾರ ತೆಗೆಸಿದ ಕಾಲೇಜಿನ ಪರವಾನಗಿ ರದ್ದುಪಡಿಸಿ, 25 ಲಕ್ಷ ರೂ. ದಂಡ ಹಾಕಿ ಎಂದು ಒತ್ತಾಯಿಸಿದೆ.

ಈ ಬಗ್ಗೆ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್. ರಘುನಾಥ್ ಮಾತನಾಡಿ, ಈ ಘಟನೆ ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಜನಿವಾರ ತೆಗೆಸಿದ ಪರಿಣಾಮ ವಿದ್ಯಾರ್ಥಿಗಳು ಮತ್ತು ಪೋಷಕರು ನೋವಿಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಕಳೆದ ವರ್ಷವೂ ಇದೇ ರೀತಿಯ ಘಟನೆ ನಡೆದಿದ್ದು, ಆಗ ಮಹಾಸಭಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. 2025ರ ಡಿಸೆಂಬರ್‌ನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಈಗ ಮತ್ತೆ ಇದೇ ಘಟನೆ ಸಂಭವಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಇದು ಬ್ರಾಹ್ಮಣ ಸಮುದಾಯದ ಮೇಲಿನ ದೌರ್ಜನ್ಯ (ಅಟ್ರಾಸಿಟಿ) ಎಂದು ಮಹಾಸಭಾ ಆರೋಪಿಸಿದ್ದು, ಈ ಘಟನೆ ಹಿಂದೆ ಯಾವುದೋ ಷಡ್ಯಂತ್ರ ಇರಬಹುದೆಂಬ ಅನುಮಾನವೂ ವ್ಯಕ್ತಪಡಿಸಿದೆ.
ಚಿಕ್ಕಬಳ್ಳಾಪುರದಲ್ಲೂ ಇದೇ ರೀತಿಯ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸುವುದಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ವಿಚಾರದಲ್ಲಿ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ಬ್ರಾಹ್ಮಣ ಮಹಾಸಭಾ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ಅಲ್ಪಸಂಖ್ಯಾತರ ಇಲಾಖೆಯಲ್ಲಿ ಟೆಂಡರ್ ಅಕ್ರಮ ಆರೋಪ : ರಾಜ್ಯ ಸರ್ಕಾರಕ್ಕೆ ಲೀಗಲ್ ನೋಟಿಸ್!



















