ಬೆಂಗಳೂರು : ಸಿದ್ದರಾಮಯ್ಯ ಸರ್ಕಾರದ ಪಾಲಿಗೆ ಬಿಸಿ ತುಪ್ಪದಂತಾಗಿದ್ದ ಒಳ ಮೀಸಲಾತಿ ಗೊಂದಲಕ್ಕೆ ಕೊನೆಗೂ ತೆರೆ ಎಳೆಯಲಾಗಿದೆ. ಇಂದು ಒಳಮೀಸಲಾತಿ ಕುರಿತಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು.
ಈ ಸಭೆಯಲ್ಲಿ 3 ಸಮುದಾಯಕ್ಕೂ ಮೀಸಲಾತಿ ಹಂಚಲು ಸರ್ಕಾರ ತೀರ್ಮಾನಿಸಿದೆ. 15% ಮೀಸಲಾತಿಯಲ್ಲೇ ವರ್ಗೀಕರಣಕ್ಕೆ ಸರ್ಕಾರ ತೀರ್ಮಾನ ಮಾಡಿದ್ದು, ಅದರಂತೆ ಎಡಗೈ ಸಮುದಾಯಕ್ಕೆ ಶೇಕಡಾ 5.25, ಬಲಗೈ ಸಮುದಾಯಕ್ಕೆ ಶೇಕಡಾ 5.25 ಹಾಗೂ ಎಸ್ಸಿ ಇತರೇ ಸಮುದಾಯಗಳಿಗೆ ಶೇಕಡಾ 4.5ರಷ್ಟು ಮೀಸಲಾತಿ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ.

ವಿಶೇಷ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್ಕೆ. ಪಾಟೀಲ್ ಪ್ರತಿಕ್ರಿಯಿಸಿ, ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ವಾರಗಳಿಂದ ಚರ್ಚೆ ನಡೆದಿತ್ತು. ರಾಷ್ಟ್ರಕ್ಕೆ ಮಾದರಿ ಆಗಬಲ್ಲ ಮಹತ್ವವಾದ ಜನರ ಬದುಕಿಗೆ ವಿಶೇಷ ತಿರುವನ್ನು ನೀಡುವ ತೀರ್ಮಾನ ತೆಗೆದುಕೊಂಡಿದೆ. ರೋಸ್ಟರ್ ವಿಚಾರದಲ್ಲಿ ಗೊಂದಲ ಸೃಷ್ಡಿ ಆಗಿತ್ತು. ಸೂಕ್ತವಾದ ಪರಿಪೂರ್ಣ ಪರಿಹಾರ ಕಂಡು ಮಾರ್ಗದರ್ಶನ ಮಾಡಿ ಪರಿಹಾರ ಕಂಡುಕೊಳ್ಳಲು ಸಿಎಂ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಏಪ್ರಿಲ್ 16ರಂದು ನಡೆದಿದ್ದ ಸಂಪುಟ ಸಭೆಯಲ್ಲೂ ಒಳಮೀಸಲು ವಿಚಾರವಾಗಿ ಚೆರ್ಚೆಯಾಗಿತ್ತು. ಒಳಮೀಸಲು ಹಂಚಿಕೆ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪರಿಶಿಷ್ಟ ಎಡಗೈ ಸಮುದಾಯದ ಸಚಿವರು ಅಂದಿನ ಸಭೆಯಲ್ಲಿ ಒತ್ತಾಯಿಸಿದ್ದರು. ಹೀಗಾಗಿ ಮುಖ್ಯಕಾರ್ಯದರ್ಶಿ ಶಲಿನಿ ರಜನೀಶ್ ನೇತೃತ್ವದಲ್ಲಿ ತಾಂತ್ರಿಕ ಮತ್ತಯ ಕಾನೂನಾತ್ಮಕ ಅಂಶಗಳ ಪರಾಮರ್ಶೆಗೆ ತಾಂತ್ರಿಕ ಸಮಿತಿ ರಚಿಸಸಲಾಗಿತ್ತು. ಕಾನೂನು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ಮತ್ತು ಅಡ್ವೋಕೇಟ್ ಜನರಲ್ ಈ ಸಮಿತಿಯಲ್ಲಿದ್ದರು.
ಒಟ್ಟಿನಲ್ಲಿ ಒಳಮೀಸಲಾತಿ ಕಗ್ಗಂಟು ಬಗೆಹರಿದಿದ್ದು, ಇನ್ನಾದರೂ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನೇಮಕಾತಿಗಳು ಪ್ರಾರಂಭವಾಗುತ್ತದೆಯೋ ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡುತ್ತದೆಯೋ ಕಾದು ನೋಡಬೇಕಿದೆ.
ಇದನ್ನೂ ಓದಿ : ಬಳ್ಳಾರಿಯಲ್ಲಿ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ವೃದ್ದೆ ಬಲಿ?



















