ಜಶ್ಪುರ (ಛತ್ತೀಸ್ಗಢ): ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ಹಣ ಗಳಿಸುವ ಆಸೆಗೆ ಬಿದ್ದು, ನಾಲ್ಕು ವರ್ಷದ ಪುಟ್ಟ ಮಗುವೊಂದನ್ನು ಬಲಿ ಪಡೆದು ಆ ಮಗುವಿನ ದೇಹದ ಅಂಗಾಂಗಗಳನ್ನು ತೆಗೆದು ಆನ್ಲೈನ್ನಲ್ಲಿ ಮಾರಾಟ ಮಾಡಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ಛತ್ತೀಸ್ಗಢದ ಜಶ್ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಸಂಬಂಧಿ ಹಾಗೂ ಆರೋಪಿಯಾದ 27 ವರ್ಷದ ಬಾಸುದೇವ್ ಅಲಿಯಾಸ್ ತಂಗ್ನೂ ಎಂಬಾತನನ್ನು ಸನ್ನಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಾಪತ್ತೆಯಾಗಿದ್ದ ಮಗು ಚೀಲದಲ್ಲಿ ಹೆಣವಾಗಿ ಪತ್ತೆ
ಸನ್ನಾ ಗ್ರಾಮದ ಆಮಟ್ ಚುವಾ ನದಿ ಅಣೆಕಟ್ಟು ಬಳಿ ವಾಸಿಸುತ್ತಿದ್ದ ರಾಮ್ಜೀತ್ ರಾಮ್ ಎಂಬುವರ 4 ವರ್ಷದ ಮಗ ಜಿತೇಂದ್ರ ರಾಮ್ ನ.5ರಂದು ದಿಢೀರ್ ನಾಪತ್ತೆಯಾಗಿದ್ದ. ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಲೊಧೇನಾಪಥ್ ಮಹುವಾ ಗ್ರಾಮದ ಜೋಳದ ಗದ್ದೆಯೊಂದರ ನೀರು ತುಂಬಿದ್ದ ತಗ್ಗಿನಲ್ಲಿ ಚೀಲದಲ್ಲಿ ತುರುಕಿ ಮುಚ್ಚಿಡಲಾಗಿದ್ದ ಮಗುವಿನ ಮೃತದೇಹ ಪತ್ತೆಯಾಗಿತ್ತು. ಮಗುವಿನ ತಂದೆ ನೀಡಿದ ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಹಿರಿಯ ಪೊಲೀಸ್ ಸುಪ್ರೀಂಟೆಂಡೆಂಟ್ (ಎಸ್ಎಸ್ಪಿ) ಲಾಲ್ ಉಮೇದ್ ಸಿಂಗ್ ನೇತೃತ್ವದ ತಂಡ, ರಾಮ್ಜೀತ್ ಅವರ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ಆತನ ಅತ್ತೆಯ ಮಗ ಬಾಸುದೇವ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭೀಕರ ಸತ್ಯ ಹೊರಬಿದ್ದಿದೆ.
ಸೋಷಿಯಲ್ ಮೀಡಿಯಾ ಪ್ರಭಾವದಿಂದ ಕೃತ್ಯ
ದಿನಗೂಲಿ ಕೆಲಸದಿಂದ ಬರುತ್ತಿದ್ದ ಆದಾಯದಿಂದ ಅಸಂತುಷ್ಟನಾಗಿದ್ದ ಆರೋಪಿ ಬಾಸುದೇವ್, ಶೀಘ್ರವಾಗಿ ಹಣ ಗಳಿಸುವ ಮಾರ್ಗಗಳಿಗಾಗಿ ಸಾಮಾಜಿಕ ಜಾಲತಾಣಗಳನ್ನು ಸತತವಾಗಿ ಜಾಲಾಡುತ್ತಿದ್ದ. ಈ ವೇಳೆ ಸಣ್ಣ ಮಕ್ಕಳ ದೇಹದ ಭಾಗಗಳನ್ನು ತೆಗೆದು ಆನ್ಲೈನ್ನಲ್ಲಿ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು ಎಂಬ ಕಲ್ಪನೆ ಆತನಿಗೆ ಬಂದಿತ್ತು. ಅದರಂತೆ ನವೆಂಬರ್ 5 ರಂದು ಮಗುವನ್ನು ಆಮಿಷವೊಡ್ಡಿ ಕರೆದೊಯ್ದ ಆರೋಪಿ, ಮದ್ಯಪಾನ ಹಾಗೂ ಕೋಳಿ ಮಾಂಸ ಖರೀದಿಸಿ ಮಗುವಿಗೂ ಮದ್ಯ ಕುಡಿಸಿದ್ದಾನೆ. ಮಗು ಅಮಲೇರಿ ನಿದ್ರೆಗೆ ಜಾರಿದ ತಕ್ಷಣ ಚಾಕುವಿನಿಂದ ಆತನ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ.
ಅಂಗಾಂಗ ತೆರವುಗೊಳಿಸಿ ಮಾರಾಟಕ್ಕೆ ಯತ್ನ
ಕೊಲೆಯ ನಂತರ ಬಾಸುದೇವ್ ಮಗುವಿನ ದೇಹವನ್ನು ಸೀಳಿ ಕಣ್ಣುಗಳು, ಶ್ವಾಸಕೋಶ ಹಾಗೂ ಮೂತ್ರಪಿಂಡಗಳನ್ನು (ಕಿಡ್ನಿ) ಹೊರತೆಗೆದು ಪ್ಲಾಸ್ಟಿಕ್ ಬಕೆಟ್ನಲ್ಲಿ ಶೇಖರಿಸಿಟ್ಟಿದ್ದ. ಬಳಿಕ ಮೃತದೇಹವನ್ನು ಕಂಬಳಿ ಮತ್ತು ರತ್ನಗಂಬಳಿಯಲ್ಲಿ ಸುತ್ತಿ ಚೀಲದಲ್ಲಿ ತುಂಬಿ ತಗ್ಗಿನಲ್ಲಿ ಹಾಕಿ ಮಣ್ಣು ಮುಚ್ಚಿದ್ದ. ಆರೋಪಿ ನೀಡಿದ ಮಾಹಿತಿಯನ್ನಾಧರಿಸಿ ಕೊಲೆಗೆ ಬಳಸಿದ ಮಾರಕಾಸ್ತ್ರಗಳು ಹಾಗೂ ದೇಹದ ಭಾಗಗಳನ್ನು ಒಳಗೊಂಡಿದ್ದ ಪ್ಲಾಸ್ಟಿಕ್ ಬಕೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.
















