ಚೆನ್ನೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಋತುವಿನಲ್ಲಿ ಸತತ ಗಾಯದ ಸಮಸ್ಯೆಗಳಿಂದ ಬಳಲುತ್ತಿರುವ ಐದು ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ, ಇದೀಗ ಮತ್ತೊಂದು ಹಿನ್ನಡೆಯನ್ನು ಎದುರಿಸಿದೆ. ತಂಡದ ಪ್ರಮುಖ ಆಲ್‌ರೌಂಡರ್ ಆಗಿ ಮಿಂಚುತ್ತಿದ್ದ ಇಂಗ್ಲೆಂಡ್‌ನ ಜೆಮಿ ಓವರ್ಟನ್ ಅವರು ಬಲ ತೊಡೆಯ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನವನ್ನು ತುಂಬಲು ಸಿಎಸ್‌ಕೆ ಫ್ರಾಂಚೈಸಿಯು ದಕ್ಷಿಣ ಆಫ್ರಿಕಾದ ಉದಯೋನ್ಮುಖ ಆಲ್‌ರೌಂಡರ್ ಡಿಯನ್ ಫಾರೆಸ್ಟರ್ ಅವರನ್ನು ಒಪ್ಪಂದಕ್ಕೆ ಸೇರಿಸಿಕೊಂಡಿದೆ.
ಮುಂಬರುವ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್‌ಜಿ) ವಿರುದ್ಧದ ಪಂದ್ಯಕ್ಕೂ ಮುನ್ನ ಜೆಮಿ ಓವರ್ಟನ್ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆ ಹಾಗೂ ಮೌಲ್ಯಮಾಪನಕ್ಕಾಗಿ ಅವರು ಇಂಗ್ಲೆಂಡ್‌ಗೆ ಮರಳಿದ್ದಾರೆ ಎಂದು ಸಿಎಸ್‌ಕೆ ಮ್ಯಾನೇಜ್ಮೆಂಟ್ ಅಧಿಕೃತವಾಗಿ ಖಚಿತಪಡಿಸಿದೆ.
ಜೆಮಿ ಓವರ್ಟನ್ ಅವರ ಅಮೋಘ ಪ್ರದರ್ಶನ
ಪ್ರಸಕ್ತ ಋತುವಿನಲ್ಲಿ ಜೆಮಿ ಓವರ್ಟನ್ ಸಿಎಸ್‌ಕೆ ತಂಡದ ಅತ್ಯಮೂಲ್ಯ ಆಟಗಾರನಾಗಿ ಹೊರಹೊಮ್ಮಿದ್ದರು. ಈ ಬಾರಿ ಒಟ್ಟು 10 ಪಂದ್ಯಗಳನ್ನಾಡಿದ್ದ ಅವರು, 17.28ರ ಸರಾಸರಿ ಹಾಗೂ 4.89ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ 14 ವಿಕೆಟ್‌ಗಳನ್ನು ಕಬಳಿಸಿದ್ದರು. ಕೇವಲ ಬೌಲಿಂಗ್ ಮಾತ್ರವಲ್ಲದೆ, ಕೆಳ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕವೂ ತಂಡಕ್ಕೆ ಆಸರೆಯಾಗಿದ್ದ ಓವರ್ಟನ್, 158.13ರ ಸ್ಟ್ರೈಕ್ ರೇಟ್‌ನಲ್ಲಿ 136 ರನ್ ಸಿಡಿಸಿದ್ದರು.
ಮೇ 11ರಂದು ಚೆಪಾಕ್ ಕ್ರೀಡಾಂಗಣದಲ್ಲಿ ಲಕ್ನೋ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಪ್ರದರ್ಶಿಸಿದ ಆಟ ಈ ಋತುವಿನ ಶ್ರೇಷ್ಠ ಪ್ರದರ್ಶನಗಳಲ್ಲಿ ಒಂದಾಗಿತ್ತು. ಪವರ್ ಪ್ಲೇನಲ್ಲಿ ಲಕ್ನೋ 21 ರನ್ ಗಳಿಸಿ ಮುನ್ನುಗ್ಗುತ್ತಿದ್ದಾಗ, ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಓವರ್ಟನ್, 36 ರನ್‌ಗಳಿಗೆ 3 ಪ್ರಮುಖ ವಿಕೆಟ್ ಕಬಳಿಸಿ ಲಕ್ನೋ ತಂಡವನ್ನು 203 ರನ್‌ಗಳಿಗೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ಅವರಿಗೆ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಯೂ ಲಭಿಸಿತ್ತು. ಇಂತಹ ಫಾರ್ಮ್‌ನಲ್ಲಿದ್ದ ಆಟಗಾರನನ್ನು ಕಳೆದುಕೊಂಡಿರುವುದು ಸಿಎಸ್‌ಕೆ ಪಾಳಯದಲ್ಲಿ ಆತಂಕ ಮೂಡಿಸಿದೆ.
ಸಿಎಸ್‌ಕೆ ಪಡೆ ಸೇರಿದ ದಕ್ಷಿಣ ಆಫ್ರಿಕಾದ ಯುವ ಪ್ರತಿಭೆ ಡಿಯನ್ ಫಾರೆಸ್ಟರ್
ಜೆಮಿ ಓವರ್ಟನ್ ಅಲಭ್ಯತೆಯಿಂದ ತೆರವಾದ ಸ್ಥಾನಕ್ಕೆ ಇದೀಗ ದಕ್ಷಿಣ ಆಫ್ರಿಕಾದ ಯುವ ಆಲ್‌ರೌಂಡರ್ ಡಿಯನ್ ಫಾರೆಸ್ಟರ್ ಅವರನ್ನು ೭೫ ಲಕ್ಷ ರೂಪಾಯಿಗಳ ಒಪ್ಪಂದದೊಂದಿಗೆ ಸಿಎಸ್‌ಕೆ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಡಿಯನ್ ಫಾರೆಸ್ಟರ್ ಅವರು ಇತ್ತೀಚೆಗಷ್ಟೇ, ಮಾರ್ಚ್ 2026ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೆ 5 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅವರು ೮೩ ರನ್ ಗಳಿಸಿದ್ದಾರೆ. ತಮ್ಮ ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆಯುತ್ತಿರುವ ಈ ಯುವ ಆಟಗಾರ, ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಸಿಎಸ್‌ಕೆ ತಂಡದ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ಹುಸಿಗೊಳಿಸುವುದಿಲ್ಲ ಎಂಬುದನ್ನು ಕಾದುನೋಡಬೇಕಿದೆ.
ಸಿಎಸ್‌ಕೆ ತಂಡವನ್ನು ಕಾಡುತ್ತಿರುವ ಗಾಯದ ಬೇತಾಳ
2026ರ ಐಪಿಎಲ್ ಋತುವು ಸಿಎಸ್‌ಕೆ ಪಾಲಿಗೆ ಗಾಯದ ಸಮಸ್ಯೆಗಳ ಸರಮಾಲೆಯನ್ನೇ ತಂದೊಡ್ಡಿದೆ. ತಂಡದ ಬಹುತೇಕ ಪ್ರಮುಖ ಆಟಗಾರರು ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾದ ವೇಗಿ ನಾಥನ್ ಎಲ್ಲಿಸ್ ಸ್ನಾಯು ಸೆಳೆತದಿಂದ ಹೊರಗುಳಿದಿದ್ದರೆ, ಎಡಗೈ ವೇಗಿ ಖಲೀಲ್ ಅಹ್ಮದ್ ಹಾಗೂ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಕೂಡ ಟೂರ್ನಿಯ ಮಧ್ಯದಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಅಲ್ಲದೆ, ಪಾದಾರ್ಪಣೆ ಪಂದ್ಯದಲ್ಲೇ ಕಾಲು ಮುರಿದುಕೊಂಡ ವೇಗಿ ರಾಮಕೃಷ್ಣ ಘೋಷ್ ಬದಲಿಗೆ ಕರ್ನಾಟಕದ ಆಲ್‌ರೌಂಡರ್ ಮ್ಯಾಕ್ನೀಲ್ ನೊರೊನ್ಹಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಯುವ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಕೂಡ ಸೈಡ್ ಸ್ಟ್ರೈನ್‌ನಿಂದಾಗಿ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದರು. ಇನ್ನು, ತಂಡದ ಪ್ರಮುಖ ಆಕರ್ಷಣೆ ಎಂಎಸ್ ಧೋನಿ ಹಾಗೂ ಆಸ್ಟ್ರೇಲಿಯಾದ ವೇಗಿ ಸ್ಪೆನ್ಸರ್ ಜಾನ್ಸನ್ ಈ ಋತುವಿನಲ್ಲಿ ಇನ್ನೂ ಕಣಕ್ಕಿಳಿದಿಲ್ಲ.
ಪ್ಲೇಆಫ್ ರೇಸ್‌ನಲ್ಲಿ ಮುಂದುವರಿದಿರುವ ಚೆನ್ನೈ ಸೂಪರ್ ಕಿಂಗ್ಸ್
ಇಷ್ಟೆಲ್ಲಾ ಗಾಯದ ಸಮಸ್ಯೆಗಳು ಹಾಗೂ ಪ್ರಮುಖ ಆಟಗಾರರ ಅಲಭ್ಯತೆಯ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಅತ್ಯುತ್ತಮ ಹೋರಾಟ ನೀಡುತ್ತಿದೆ. ಪ್ಲೇಆಫ್‌ಗೆ ಲಗ್ಗೆಯಿಡುವ ರೇಸ್‌ನಲ್ಲಿರುವ ಸಿಎಸ್‌ಕೆ, ಪ್ರಸ್ತುತ ತಾನಾಡಿರುವ 11 ಪಂದ್ಯಗಳಿಂದ 12 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಕಾಯ್ದುಕೊಂಡಿದೆ. ಲೀಗ್ ಹಂತದ ಅಂತಿಮ ಘಟ್ಟದ ಪಂದ್ಯಗಳು ನಿರ್ಣಾಯಕವಾಗಿದ್ದು, ಹೊಸ ಆಟಗಾರರ ಸೇರ್ಪಡೆಯೊಂದಿಗೆ ತಂಡವು ಪ್ಲೇಆಫ್ ಹಂತಕ್ಕೇರುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ : ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರಾ ಹಾರ್ದಿಕ್ ಪಾಂಡ್ಯ? IPL 2027ರ ಹರಾಜಲ್ಲಿ 25 ಕೋಟಿ ಬಿಡ್ಡಿಂಗ್ ನಿರೀಕ್ಷೆ!


















