ಬೆಂಗಳೂರು : ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುತ್ತಿರುವ ಟೀಕೆಗಳು ಮತ್ತು ತಮ್ಮ ಗಾಯದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ‘ಇಂಡಿಯಾ ಟುಡೇ’ ಆಯೋಜಿಸಿದ್ದ ‘ಕರ್ನಾಟಕ ರೌಂಡ್ಟೇಬಲ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಟ್ರೋಲಿಗರಿಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡುವ ಜೊತೆಗೆ ತಾವು ಅನುಭವಿಸಿದ ಕಠಿಣ ಪರಿಸ್ಥಿತಿಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಶ್ರೇಯಾಂಕಾ ಪಾಟೀಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ್ಗೆ ನೃತ್ಯದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಬಾಲಿವುಡ್ನ ಜನಪ್ರಿಯ ‘ಬಬ್ಲಿ ಬದ್ಮಾಶ್ ಹೈ’ ಹಾಡಿಗೆ ನೃತ್ಯ ಮಾಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದಾಗ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವರನ್ನು ಟೀಕಿಸಿದ್ದರು. ಆದರೆ, ಈ ಟೀಕೆಗಳನ್ನು ತಾವು ಸಕಾರಾತ್ಮಕವಾಗಿ ಸ್ವೀಕರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಟ್ರೋಲ್ ಮಾಡುವವರು ಅಥವಾ ಟೀಕಿಸುವವರು ಇರೋದರಿಂದಲೇ ತಮಗೊಂದು ಮಟ್ಟದ ಜನಪ್ರಿಯತೆ ಸಿಗುತ್ತಿದೆ ಮತ್ತು ಜನರು ತಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಶ್ರೇಯಾಂಕಾ ಅಭಿಪ್ರಾಯಪಟ್ಟಿದ್ದಾರೆ. ತಾವು ಇಷ್ಟಪಡುವ ಬಟ್ಟೆಗಳನ್ನು ಧರಿಸಲು ಮತ್ತು ತಮಗೆ ಖುಷಿ ಕೊಡುವ ನೃತ್ಯ ಮಾಡಲು ಯಾರಿಗೂ ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ. ತಾವು ಕ್ರಿಕೆಟ್ನಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದನ್ನು ಕಂಡು ಅಸೂಯೆಯಿಂದ ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಅವರು ದಿಟ್ಟವಾಗಿ ಉತ್ತರಿಸಿದ್ದಾರೆ.
ಗಾಯದ ಸಮಸ್ಯೆಯಿಂದ ಕ್ರಿಕೆಟ್ ತೊರೆಯುವ ಆಲೋಚನೆ
ಸಮಾಜಿಕ ಜಾಲತಾಣಗಳಲ್ಲಿ ಸದಾ ಹಸನ್ಮುಖಿಯಾಗಿ ಕಾಣುವ ಶ್ರೇಯಾಂಕಾ, ಕ್ರಿಕೆಟ್ ಮೈದಾನದಲ್ಲಿ ಕಠಿಣ ಸವಾಲುಗಳನ್ನು ಎದುರಿಸಿದ್ದಾರೆ. ಸುಮಾರು 16 ತಿಂಗಳ ಅಂತರದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದ ಅವರು, ಕಳೆದ ಜೂನ್ನಲ್ಲಿ ಮತ್ತೆ ಪಾದದ ಗಾಯಕ್ಕೆ ತುತ್ತಾಗಿದ್ದರು. ಈ ಗಾಯದ ಕಾರಣದಿಂದಾಗಿ ಇಂಗ್ಲೆಂಡ್ನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ಗೆ ಅವರು ಅಲಭ್ಯರಾಗಿದ್ದಾರೆ. ಸತತವಾಗಿ ಗಾಯಗೊಳ್ಳುತ್ತಿದ್ದ ಆ ಕಠಿಣ ದಿನಗಳಲ್ಲಿ ತಾವು ಕ್ರಿಕೆಟ್ ಆಡುವುದನ್ನೇ ಬಿಡುವ ನಿರ್ಧಾರ ಮಾಡಿದ್ದಾಗಿ ಅವರು ಸ್ಮರಿಸಿಕೊಂಡಿದ್ದಾರೆ.
ಬದುಕಿನ ದೃಷ್ಟಿಕೋನ ಬದಲಿಸಿದ ‘ಆಪರೇಷನ್ ಸಫೇದ್ ಸಾಗರ್’
ತಮ್ಮ ತರಬೇತುದಾರ ಅರ್ಜುನ್ ದೇವ್ ಅವರ ಬಳಿ ಕ್ರಿಕೆಟ್ ತೊರೆಯುವ ಬಗ್ಗೆ ಮಾತನಾಡಿದ್ದ ದಿನಗಳಲ್ಲೇ ‘ಆಪರೇಷನ್ ಸಫೇದ್ ಸಾಗರ್’ ಎಂಬ ವೆಬ್ ಸೀರೀಸ್ ವೀಕ್ಷಿಸಿದ್ದು ಅವರ ಆಲೋಚನಾ ಲಹರಿಯನ್ನೇ ಬದಲಿಸಿತಂತೆ. ಯೋಧರು ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವಾಗ, ಕ್ರೀಡೆಯಲ್ಲಿನ ಸೋಲು-ಗೆಲುವು ಹಾಗೂ ಗಾಯದ ಸಮಸ್ಯೆಗಳು ತೀರಾ ಸಣ್ಣದು ಎಂಬ ಸತ್ಯ ಅವರಿಗೆ ಅರಿವಾಯಿತು. ಒಂದು ಕೆಟ್ಟ ದಿನದ ನಂತರವೂ ಎದ್ದು ಬಂದು ತಮಗಿಷ್ಟವಾದ ಆಟವನ್ನು ಆಡಬಹುದು ಎಂಬ ಭರವಸೆ ಅವರಲ್ಲಿ ಮೂಡಿತು. ಈ ವಿಚಾರವೇ ಶ್ರೇಯಾಂಕಾ ಅವರನ್ನು ಮತ್ತೆ ಕ್ರಿಕೆಟ್ ಮೈದಾನದತ್ತ ಸೆಳೆಯುವಂತೆ ಮಾಡಿತು.
ಮುಂದಿನ ಸರಣಿಗಳಿಗೆ ಶ್ರೇಯಾಂಕಾ ಲಭ್ಯತೆ
ಕಳೆದ ಎರಡು ತಿಂಗಳಿಂದ ಯಾವುದೇ ಕ್ರಿಕೆಟ್ ಪಂದ್ಯಗಳನ್ನು ಆಡದ ಶ್ರೇಯಾಂಕಾ, ಯುಎಇಯಲ್ಲಿ ನಡೆಯಲಿರುವ ಮುಂಬರುವ ಮಹಿಳಾ ಏಷ್ಯಾ ಕಪ್ನಿಂದ ಹೊರಗುಳಿದಿದ್ದಾರೆ. ಆದರೆ, ಈ ವರ್ಷಾಂತ್ಯದಲ್ಲಿ ಜಪಾನ್ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗಾಗಿ ಪ್ರಕಟಿಸಲಾದ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಡಿಸೆಂಬರ್ 2023 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಅವರು ಇದುವರೆಗೆ ಮೂರು ಏಕದಿನ ಮತ್ತು 24 ಟಿ20 ಪಂದ್ಯಗಳನ್ನಾಡಿ 34 ವಿಕೆಟ್ಗಳನ್ನು ಕಬಳಿಸಿದ್ದಾರೆ. ದೇಶೀಯ ಮಟ್ಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವೂ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಶೀಘ್ರದಲ್ಲೇ ಅವರು ಸಂಪೂರ್ಣ ಫಿಟ್ನೆಸ್ ಮರಳಿ ಪಡೆದು ಮತ್ತೆ ಮೈದಾನದಲ್ಲಿ ಮಿಂಚಲಿದ್ದಾರೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಇದನ್ನೂ ಓದಿ : ನೇಪಾಳ-ಟಿಬೇಟ್ ಗಡಿಭಾಗದಲ್ಲಿ ಭೀಕರ ಪ್ರವಾಹ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಅಲರ್ಟ್!



















