ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ (Paris Olympics 2024) ಪುರುಷರ ಹಾಕಿಯಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ.
ಗುಂಪು ಹಂತದ ಪಂದ್ಯದಲ್ಲಿ ಭಾರತ ತಂಡ ಬರೋಬ್ಬರಿ 52 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಆಘಾತ ನೀಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 3-2 ಗೋಲುಗಳಿಂದ ಸೋಲಿಸುವ ಮೂಲಕ ಭಾರತದ (India) ಹಾಕಿ (Hockey) ತಂಡವು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.
1972ರ ಒಲಿಂಪಿಕ್ಸ್ ನಂತರ ಭಾರತವು ಹಾಕಿಯಲ್ಲಿ ಆಸ್ಟ್ರೇಲಿಯಾ (Australia) ತಂಡವನ್ನು ಸೋಲಿಸಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಭಾರತ ತಂಡ ಸೋಲಿಸಿದೆ. ಕಳೆದ ಬಾರಿಯ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವು ರಜತ ಪದಕ ಗೆದ್ದಿತ್ತು. ಭಾರತ ಪರ ಅಭಿಷೇಕ್ ಮತ್ತು ಹರ್ಮನ್‌ಪ್ರೀತ್ ಸಿಂಗ್ (2) ಗೋಲು ಗಳಿಸಿ ಶುಭಾರಂಭ ಮಾಡಿದರು. ಥಾಮಸ್ ಕ್ರೇಗ್ ಮತ್ತು ಬ್ಲೇಕ್ ಗೋವರ್ಸ್ ಆಸ್ಟ್ರೇಲಿಯಾ ಪರ ಗೋಲು ಗಳಿಸಿದರು. ಈ ಗೆಲುವಿನ ಮೂಲಕ ಭಾರತ (10 ಅಂಕಗಳು, 5 ಪಂದ್ಯಗಳು) ಪೂಲ್ ಬಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.
ಬಿ ಗುಂಪಿನಲ್ಲಿ ಬೆಲ್ಜಿಯಂ ಅಗ್ರ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಭಾರತವು ನ್ಯೂಜಿಲೆಂಡ್ ವಿರುದ್ಧ ಜಯದೊಂದಿಗೆ ಓಟ ಆರಂಭಿಸಿತು. ಅರ್ಜೆಂಟೀನಾ ವಿರುದ್ಧದ ಪಂದ್ಯ ಡ್ರಾ ಆಯಿತು. ಐರ್ಲೆಂಡ್ ತಂಡದ ವಿರುದ್ಧ ಭಾರತ ಗೆಲುವು ದಾಖಲಿಸಿದೆ. ಈಗ ಭಾರತ ತಂಡ ಕ್ವಾರ್ಟರ್ ಫೈನಲ್ ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.


















