ಹೈದರಾಬಾದ್: ಜಾಗತಿಕ ಮಟ್ಟದಲ್ಲಿ ಉದ್ಯೋಗ ಮಾರುಕಟ್ಟೆ ಮಂದಗತಿಯಲ್ಲಿದೆ ಎಂಬ ಆತಂಕದ ನಡುವೆಯೇ, ಐಐಟಿ ಹೈದರಾಬಾದ್ (IITH) ವಿದ್ಯಾರ್ಥಿಯೊಬ್ಬರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿ ಎಡ್ವರ್ಡ್ ನಾಥನ್ ವರ್ಗೀಸ್ ಅವರಿಗೆ ವಾರ್ಷಿಕ 2.5 ಕೋಟಿ ರೂಪಾಯಿಗಳ ಬೃಹತ್ ಉದ್ಯೋಗದ ಆಫರ್ ಲಭಿಸಿದೆ. ಇದು 2008ರಲ್ಲಿ ಸಂಸ್ಥೆ ಸ್ಥಾಪನೆಯಾದ ನಂತರ ದೊರೆತ ಅತಿ ಹೆಚ್ಚಿನ ಪ್ಯಾಕೇಜ್ ಆಗಿದೆ.
ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾಗಿರುವ ವರ್ಗೀಸ್ ಅವರನ್ನು ನೆದರ್‌ಲ್ಯಾಂಡ್ಸ್ ಮೂಲದ ಪ್ರಸಿದ್ಧ ಟ್ರೇಡಿಂಗ್ ಸಂಸ್ಥೆ ‘ಆಪ್ಟಿವರ್’ (Optiver) ಸಾಫ್ಟ್‌ವೇರ್ ಎಂಜಿನಿಯರ್ ಆಗಿ ನೇಮಕ ಮಾಡಿಕೊಂಡಿದೆ. ವಿಶೇಷವೆಂದರೆ, ಸಾಮಾನ್ಯ ಕ್ಯಾಂಪಸ್ ಇಂಟರ್ವ್ಯೂಗಳಿಗಿಂತ ಮುನ್ನವೇ ಇವರು ತಮ್ಮ ಇಂಟರ್ನ್‌ಶಿಪ್ ಅವಧಿಯಲ್ಲಿ ತೋರಿದ ಅಸಾಧಾರಣ ಪ್ರತಿಭೆಯಿಂದಾಗಿ ‘ಪ್ರೀ-ಪ್ಲೇಸ್‌ಮೆಂಟ್ ಆಫರ್’ (PPO) ಗಿಟ್ಟಿಸಿಕೊಂಡಿದ್ದಾರೆ. ಈ ವರ್ಷದ ಜುಲೈನಿಂದ ಅವರು ಪೂರ್ಣಾವಧಿ ಕೆಲಸ ಆರಂಭಿಸಲಿದ್ದಾರೆ.
ದಾಖಲೆಗಳನ್ನು ಪುಡಿಗಟ್ಟಿದ ಸಾಧನೆ
ಐಐಟಿ ಹೈದರಾಬಾದ್‌ನಲ್ಲಿ ಈ ಹಿಂದೆ 2017ರಲ್ಲಿ 1 ಕೋಟಿ ರೂಪಾಯಿ ಪ್ಯಾಕೇಜ್ ದೊರೆತಿದ್ದು ಇದುವರೆಗಿನ ದಾಖಲೆಯಾಗಿತ್ತು. ಸಾಮಾನ್ಯವಾಗಿ ಈ ಸಂಸ್ಥೆಯಲ್ಲಿ 60 ರಿಂದ 90 ಲಕ್ಷದವರೆಗಿನ ಆಫರ್ ಗರಿಷ್ಠ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಎಡ್ವರ್ಡ್ ಅವರ ಈ ಸಾಧನೆಯು ಹಳೆಯ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದೆ. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಎಡ್ವರ್ಡ್, ನಂತರ ಬೆಂಗಳೂರಿನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರೈಸಿದ್ದರು. ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್‌ನಲ್ಲಿ (Competitive Programming) ದೇಶದ ಅಗ್ರ 100 ಪ್ರತಿಭೆಗಳಲ್ಲಿ ಒಬ್ಬರಾಗಿರುವುದು ಇವರಿಗೆ ಈ ಮೈಲಿಗಲ್ಲು ತಲುಪಲು ಸಹಕಾರಿಯಾಗಿದೆ.
ಸಂಸ್ಥೆಯ ಸರಾಸರಿ ವೇತನದಲ್ಲಿ 75% ಏರಿಕೆ
ಈ ಸಾಧನೆಯು ಕೇವಲ ಒಬ್ಬ ವಿದ್ಯಾರ್ಥಿಗೆ ಸೀಮಿತವಾಗಿಲ್ಲ; ಇದು ಐಐಟಿ ಹೈದರಾಬಾದ್‌ನ ಒಟ್ಟಾರೆ ಪ್ಲೇಸ್‌ಮೆಂಟ್ ಚಿತ್ರಣವನ್ನೇ ಬದಲಿಸಿದೆ. 2024ರಲ್ಲಿ 20.8 ಲಕ್ಷದಷ್ಟಿದ್ದ ಸರಾಸರಿ ಪ್ಯಾಕೇಜ್, ಈ ಬಾರಿ 36.2 ಲಕ್ಷ ರೂಪಾಯಿಗೆ ಏರಿಕೆಯಾಗಿದೆ (ಶೇ. 75ರಷ್ಟು ಜಿಗಿತ). ಮತ್ತೊಬ್ಬ ವಿದ್ಯಾರ್ಥಿಗೆ 1.1 ಕೋಟಿ ರೂಪಾಯಿ ಆಫರ್ ದೊರೆತಿದೆ. ಮೊದಲ ಹಂತದ ಪ್ಲೇಸ್‌ಮೆಂಟ್‌ನಲ್ಲಿ ಒಟ್ಟು 24 ಅಂತರಾಷ್ಟ್ರೀಯ ಆಫರ್‌ಗಳು ಲಭಿಸಿವೆ.
“ನಮ್ಮ ಗುರಿ ಕೇವಲ ದೊಡ್ಡ ಮೊತ್ತದ ಪ್ಯಾಕೇಜ್ ನೀಡುವುದಲ್ಲ, ಉದ್ಯೋಗ ಬಯಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಉತ್ತಮ ಕಂಪನಿಗಳಲ್ಲಿ ಅವಕಾಶ ಕಲ್ಪಿಸುವುದು,” ಎಂದು ಕೆರಿಯರ್ ಸರ್ವಿಸಸ್ ವಿಭಾಗದ ಫ್ಯಾಕಲ್ಟಿ ಇನ್-ಚಾರ್ಜ್ ಮಯೂರ್ ವೈದ್ಯ ತಿಳಿಸಿದ್ದಾರೆ. ಪ್ರಸ್ತುತ ಪದವಿಪೂರ್ವ ವಿದ್ಯಾರ್ಥಿಗಳಲ್ಲಿ ಶೇ. 62ರಷ್ಟು ಮಂದಿ ಈಗಾಗಲೇ ಉದ್ಯೋಗಗಳನ್ನು ಖಚಿತಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: 2026ರಲ್ಲಿ ಜಗತ್ತು ಮಹಾಯುದ್ಧಕ್ಕೆ ಸಾಕ್ಷಿಯಾಗಲಿದೆಯೇ | ನಾಸ್ಟ್ರಾಡಾಮಸ್ ಭವಿಷ್ಯವಾಣಿ ಹೇಳೋದೇನು?



















