ಬೆಂಗಳೂರು : ನಗರದ ಮರಿಯಪ್ಪನಪಾಳ್ಯದ ಸೆಂಟ್ ಪಿಲೋಮಿನ ಶಾಲೆಯಲ್ಲಿ ಓದುತ್ತಿದ್ದ 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಶಿಕ್ಷಕರ ಕಿರುಕುಳ ಮತ್ತು ಮಾನಸಿಕ ಒತ್ತಡ ತಾಳಲಾರದೆ ವಿದ್ಯಾರ್ಥಿ ಈ ನಿರ್ಧಾರಕ್ಕೆ ಮುಂದಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಬಳಿಕ ಅಸ್ವಸ್ಥಗೊಂಡ ವಿದ್ಯಾರ್ಥಿಯನ್ನು ಕೂಡಲೇ ನಾಯಂಡಹಳ್ಳಿಯ ನೇಟಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ವಿದ್ಯಾರ್ಥಿಗೆ ಶಿಕ್ಷಕರು ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದು, ಶಾಲೆಯಲ್ಲಿ ನಿರಂತರವಾಗಿ ಕಿರುಕುಳ ಮತ್ತು ಒತ್ತಡ ನೀಡಲಾಗುತ್ತಿತ್ತು. ಇದೇ ಕಾರಣದಿಂದ ಸಮರ್ಥ ಮಾನಸಿಕವಾಗಿ ಕುಗ್ಗಿದ್ದ ಎನ್ನಲಾಗಿದೆ.
ವಿದ್ಯಾರ್ಥಿಯ ತಂದೆ ಮಹೇಶ್ ಕುಮಾರ್ ಕಿರಾಣಿ ಅಂಗಡಿ ನಡೆಸುತ್ತಿದ್ದು, ತಾಯಿ ಕುಸುಮ ಖಾಸಗಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗನ ಸ್ಥಿತಿಯಿಂದ ಕುಟುಂಬ ಸದ್ಯ ಕಂಗಾಲಾಗಿದ್ದು, ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಶಾಲಾ ಆಡಳಿತದ ನಿರ್ಲಕ್ಷ್ಯ ಹಾಗೂ ಶಿಕ್ಷಕರ ವರ್ತನೆ ಬಗ್ಗೆ ಪ್ರಶ್ನೆ ಎತ್ತಿರುವ ಪೊಷಕರು, ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಯ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣವೇನು? ಶಾಲೆಯಲ್ಲಿನ ಕಿರುಕುಳವೇ ಇದಕ್ಕೆ ಕಾರಣವೇ? ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತನಿಖೆ ಆರಂಭಿಸುವಂತೆ ಒತ್ತಾಯಗಳು ಕೇಳಿಬರುತ್ತಿದ್ದು, ಶಿಕ್ಷಣ ಇಲಾಖೆ ಕೂಡಲೇ ಮಧ್ಯಪ್ರವೇಶಿಸಿ ಸತ್ಯಾಂಶ ಹೊರತೆಗೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : MNC ಜಾಬ್ ಕೊಡಿಸುವ ಆಮಿಷ ಒಡ್ಡಿ ಸಾವಿರಾರು ಮಂದಿಗೆ ವಂಚನೆ ; ಖತರ್ನಾಕ್ ಗ್ಯಾಂಗ್ ಬಂಧನ!



















