ನವದೆಹಲಿ : ಭಾರತೀಯ ವಾಯುಪಡೆಯ (IAF) ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್ ಅವರು ಗ್ವಾಲಿಯರ್‌ನ ಟ್ಯಾಕ್ಟಿಕ್ಸ್ ಮತ್ತು ಏರ್ ಕಾಂಬ್ಯಾಟ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (TACDE) ನಲ್ಲಿ ಕಠಿಣವಾದ ‘ಫೈಟರ್ ಕಾಂಬ್ಯಾಟ್ ಲೀಡರ್’ (FCL) ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ವಾಯುಪಡೆಯ ಪ್ರಥಮ ಮಹಿಳಾ ‘ಟಾಪ್ ಗನ್’ ಪೈಲಟ್ ಎಂಬ ಸುವರ್ಣ ಇತಿಹಾಸ ಬರೆದಿದ್ದಾರೆ.
20 ವಾರಗಳ ಅವಧಿಯ ಈ ತರಬೇತಿಯು ಅತ್ಯಂತ ಸವಾಲಿನದ್ದಾಗಿದ್ದು, ಆಯ್ದ ಅತ್ಯುತ್ತಮ ಪೈಲಟ್‌ಗಳಿಗೆ ಮಾತ್ರ ಇದರಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಈ ಸಾಧನೆಯೊಂದಿಗೆ ಭಾವನಾ ಕಾಂತ್ ಅವರು ವಾಯುಪಡೆಯ ಮುಂಚೂಣಿ ಸಮರ ತಂತ್ರಜ್ಞರ ಸಾಲಿಗೆ ಸೇರ್ಪಡೆಗೊಂಡಿದ್ದು, ಸಂಕೀರ್ಣ ವಾಯು ದಾಳಿ ಹಾಗೂ ಯುದ್ಧ ಕಾರ್ಯಾಚರಣೆಗಳ ನೇತೃತ್ವ ವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ.
ಅಮೆರಿಕ ನೌಪಡೆಯ ವಿಶ್ವಪ್ರಸಿದ್ಧ ‘ಟಾಪ್ ಗನ್’ ತರಬೇತಿಗೆ ಸಮಾನವೆಂದು ಪರಿಗಣಿಸಲಾಗುವ ಈ ‘ಟ್ಯಾಕ್ಡೆ’ (TACDE) ಸಂಸ್ಥೆಯು, ವಾಯುಪಡೆಯ ಅತ್ಯಂತ ಅನುಭವಿ ಯುದ್ಧ ವಿಮಾನ ಪೈಲಟ್‌ಗಳು ಹಾಗೂ ಕಂಟ್ರೋಲರ್‌ಗಳನ್ನು ತರಬೇತುದಾರರನ್ನಾಗಿ ಹೊಂದಿದೆ. ಇಲ್ಲಿ ಅತ್ಯಾಧುನಿಕ ಯುದ್ಧ ತಂತ್ರಗಳು, ಮಿಷನ್ ಯೋಜನೆ ಹಾಗೂ ಆಕಾಶದಿಂದ ಆಕಾಶಕ್ಕೆ ಮತ್ತು ಆಕಾಶದಿಂದ ನೆಲಕ್ಕೆ ನಡೆಸುವ ಕಠಿಣ ಕಾರ್ಯಾಚರಣೆಗಳ ತರಬೇತಿ ನೀಡಲಾಗುತ್ತದೆ.
ಬಿಹಾರದ ಮಗಳಿಂದ ರಕ್ಷಣಾ ಕ್ಷೇತ್ರದ ಕ್ರಾಂತಿ
ಬಿಹಾರದ ದರ್ಭಾಂಗ ಜಿಲ್ಲೆಯ ಎಂಜಿನಿಯರಿಂಗ್ ಪದವೀಧರೆಯಾದ ಭಾವನಾ ಕಾಂತ್, 2016ರ ಜೂನ್‌ನಲ್ಲಿ ಆವನಿ ಚತುರ್ವೇದಿ ಮತ್ತು ಮೋಹನಾ ಸಿಂಗ್ ಅವರೊಂದಿಗೆ ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್‌ಗಳ ಬ್ಯಾಚ್‌ನಲ್ಲಿ ಸೇರ್ಪಡೆಗೊಂಡಿದ್ದರು. 2019ರಲ್ಲಿ ಹಗಲಿನ ವೇಳೆಯಲ್ಲಿ ಯುದ್ಧ ವಿಮಾನ ಕಾರ್ಯಾಚರಣೆಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು, ಆರಂಭದಲ್ಲಿ ಮಿಗ್-21 ಬೈಸನ್ ಚಲಾಯಿಸಿ, ನಂತರ ಸುಖೋಯ್ ಸು-30 ಎಂಕೆಐ ಯುದ್ಧ ವಿಮಾನಕ್ಕೆ ಬಡ್ತಿ ಪಡೆದರು.
2021ರ ಗಣರಾಜ್ಯೋತ್ಸವ ಪಥಸಂಚಲನ ಹಾಗೂ 2024ರ ಗಣರಾಜ್ಯೋತ್ಸವದ ಫ್ಲೈಪಾಸ್ಟ್‌ನಲ್ಲಿ ಭಾಗವಹಿಸಿದ ಪ್ರಥಮ ಮಹಿಳಾ ಫೈಟರ್ ಪೈಲಟ್ ಎಂಬ ಕೀರ್ತಿಯೂ ಇವರಿಗಿದೆ. ಭಾವನಾ ಅವರ ಈ ಹೊಸ ಸಾಧನೆಯು ಭಾರತೀಯ ಸಶಸ್ತ್ರ ಪಡೆಗಳ ಸಮರ ವಿಭಾಗದಲ್ಲಿ ಮಹಿಳೆಯರ ಪ್ರಬಲ ಉಪಸ್ಥಿತಿ ಮತ್ತು ನಾಯಕತ್ವಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ : “ಲೆಜೆಂಡ್ ಹೇಳಿದ ಹಾಗೆ..” : ರೋಹಿತ್ ಬೈದಿದ್ದ ಹಳೇ ಘಟನೆಯನ್ನು ನೆನಪಿಸಿಕೊಂಡ ಜೈಸ್ವಾಲ್



















