ವಾರದಲ್ಲಿ 2ನೇ ಘಟನೆ: ತಮಿಳುನಾಡಿನ ಜೈಲುಗಳಲ್ಲಿ ಭದ್ರತಾ ಲೋಪ
ದೇಶಾದ್ಯಂತ ಜೈಲುಗಳ ಸ್ಥಿತಿ ಹೇಗಿದೆ?
ಸುರಂಗ ತೋಡಿಲ್ಲ, ಗೋಡೆ ಹತ್ತಿಲ್ಲ, ಕಾವಲುಗಾರರ ಮೇಲೆ ದಾಳಿ ಮಾಡಿಲ್ಲ! ಕೇವಲ ಅಪಸ್ಮಾರ ಬಂದಂತೆ ನಟಿಸಿ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ ಈ ಖದೀಮರು!ಹೌದು ಅಪಸ್ಮಾರದ ವಿಚಿತ್ರ ತಂತ್ರ ಬಳಸಿ ತಮಿಳುನಾಡಿನ ಜೈಲಿನಿಂದ ಬರೋಬ್ಬರಿ 17 ಕೈದಿಗಳು ಪರಾರಿಯಾಗಿದ್ದಾರೆ. ಇದೇ ಸಮಯದಲ್ಲಿ ಚೆನ್ನೈನ ಮತ್ತೊಂದು ಜೈಲಿನಿಂದಲೂ ಕೈದಿಗಳು ತಪ್ಪಿಸಿಕೊಂಡ ಘಟನೆ ವರದಿಯಾಗಿದೆ. ಒಂದರ ಹಿಂದೆ ಒಂದರಂತೆ ನಡೆಯುತ್ತಿರುವ ಈ ಘಟನೆಗಳು ತಮಿಳುನಾಡಿನ ಜೈಲುಗಳ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿವೆ.ಹಾಗಾದರೆ, 17 ಕೈದಿಗಳು ರೂಪಿಸಿದ ಯೋಜನೆ ಏನು? ಅವರು ತಪ್ಪಿಸಿಕೊಂಡಿದ್ದು ಹೇಗೆ? ಪರಾರಿಯಾದವರ ಪೈಕಿ ಎಷ್ಟು ಮಂದಿ ಸಿಕ್ಕಿಬಿದ್ದಿದ್ದಾರೆ? ರಾಜ್ಯದ ಜೈಲುಗಳಲ್ಲಿ ನಿಜಕ್ಕೂ ಏನು ನಡೆಯುತ್ತಿದೆ? ದೇಶದ ಉಳಿದ ಜೈಲುಗಳ ಪರಿಸ್ಥಿತಿ ಹೇಗಿದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ.
ಅಪಸ್ಮಾರದ ನಾಟಕವಾಡಿ 17 ಕೈದಿಗಳು ಎಸ್ಕೇಪ್!
ತಮಿಳುನಾಡಿನ ಥೇಣಿ ಜಿಲ್ಲೆಯ ತೆಕ್ಕಂಪಟ್ಟಿ ಉಪಜೈಲಿನಲ್ಲಿ ಅಕ್ಟೋಬರ್ 26ರಂದು ನಡೆದ ಘಟನೆಯಿದು. ವಿಚಾರಣೆ ಎದುರಿಸುತ್ತಿದ್ದ 17 ಕೈದಿಗಳು ಒಟ್ಟಾಗಿ ಜೈಲಿನಿಂದ ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿದ್ದರು. ಇವರಲ್ಲಿ ಕೆಲವರು ಗಾಂಜಾ ಹೊಂದಿದ್ದ, ಕಳ್ಳತನ ಮತ್ತು ಕೊಲೆ ಯತ್ನದಂತಹ ಪ್ರಕರಣಗಳನ್ನು ಎದುರಿಸುತ್ತಿದ್ದರೆ, ಐವರು ಕೊಲೆ ಆರೋಪಿಗಳು.ಆರಂಭದಲ್ಲಿ ಈ ಕೈದಿಗಳು ಅಪಸ್ಮಾರ ಬಂದಂತೆ ನಟಿಸಿ ಜೈಲು ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ಅನುಸರಿಸಿದರು. ಅಸ್ವಸ್ಥತೆಯ ನೆಪದಲ್ಲಿ ಭದ್ರತಾ ವ್ಯವಸ್ಥೆಯಲ್ಲಿನ ಅವಕಾಶವನ್ನು ಬಳಸಿಕೊಂಡು ಜೈಲಿನಿಂದ ಹೊರಬರುವಲ್ಲಿ ಯಶಸ್ವಿಯಾದರು. ಈ ಘಟನೆ ಜೈಲಿನಲ್ಲಿನ ಕಾವಲು, ಭದ್ರತಾ ವ್ಯವಸ್ಥೆ ಮತ್ತು ಕೈದಿಗಳ ಆರೋಗ್ಯ ತಪಾಸಣೆಯ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪರಾರಿಯಾದವರಿಗಾಗಿ ಬೃಹತ್ ಶೋಧ ಕಾರ್ಯಾಚರಣೆ
ಕೈದಿಗಳು ತಪ್ಪಿಸಿಕೊಂಡಿರುವುದು ತಿಳಿಯುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ದಕ್ಷಿಣ ವಲಯದ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಯಿತು. ರಸ್ತೆಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿ, ಬಸ್ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಲ್ಲಿ ಹುಡುಕಾಟ ನಡೆಸಲಾಯಿತು. ಪರಾರಿಯಾದವರ ಚಲನವಲನ ಪತ್ತೆಹಚ್ಚಲು ಡ್ರೋನ್‌ಗಳ ನೆರವನ್ನೂ ಪಡೆಯಲಾಯಿತು.
ಪೊಲೀಸರ ಮಾಹಿತಿ ಪ್ರಕಾರ, ಪರಾರಿಯಾದವರಲ್ಲಿ ಪ್ರವೀಣ್ ಕುಮಾರ್ ಎಂಬಾತನನ್ನು ಸುಮಾರು ಒಂದು ಗಂಟೆಯೊಳಗೆ ಸಮೀಪದ ಅರಣ್ಯ ಪ್ರದೇಶದಲ್ಲಿ ಬಂಧಿಸಲಾಯಿತು. ಅಕ್ಟೋಬರ್ 27ರ ಮಧ್ಯಾಹ್ನದ ವೇಳೆಗೆ ಇನ್ನೂ 12 ಮಂದಿ ಪೊಲೀಸರ ವಶಕ್ಕೆ ಸಿಕ್ಕಿದ್ದರು. ಬಳಿಕ ಉಳಿದವರನ್ನೂ ಪತ್ತೆಹಚ್ಚಲಾಯಿತು.ಇದೀಗ ಬಂಧಿತ ಕೈದಿಗಳನ್ನು ವಿಚಾರಣೆಗೊಳಪಡಿಸಿ, ಪರಾರಿಯ ಹಿಂದಿನ ಯೋಜನೆ ಮತ್ತು ಇತರ ಕೈದಿಗಳ ಸುಳಿವು ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ.
ಪೆಟ್ಟು ಬಿದ್ದಿದ್ದು ಕಾವಲು ವ್ಯವಸ್ಥೆಗೆ!
ಈ ಪರಾರಿಯಲ್ಲಿ ಕೇವಲ ಮೋಸವಷ್ಟೇ ಇರಲಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ, ಕೈದಿಯೊಬ್ಬನಿಗೆ ಅಪಸ್ಮಾರ ಬಂದಂತೆ ಕಂಡಾಗ ನೆರವಿಗೆ ಧಾವಿಸಿದ ಸಿಬ್ಬಂದಿಯ ಮೇಲೆ ಕೈದಿಗಳು ಏಕಾಏಕಿ ಹಲ್ಲೆ ಮಾಡಿದ್ದರು. ಮೂವರು ಸಿಬ್ಬಂದಿಗೆ ಗಾಯಗಳಾಗಿದ್ದು, ಒಬ್ಬ ಭದ್ರತಾ ಸಿಬ್ಬಂದಿಯ ತಲೆಗೆ ಗಂಭೀರ ಗಾಯವಾಗಿದೆ. ಬಳಿಕ ಈ ಕೈದಿಗಳು ಜೈಲಿನ ಮುಖ್ಯ ದ್ವಾರದ ಕೀಲಿಗಳನ್ನು ಕಿತ್ತುಕೊಂಡು, ಬಾಗಿಲು ತೆರೆದು ಹೊರಗೆ ಓಡಿಹೋಗಿದ್ದರು.ಅಂದರೆ, ಕೈದಿಗಳು ಜೈಲಿನ ಗೋಡೆ ಹತ್ತಿ ತಪ್ಪಿಸಿಕೊಂಡಿದ್ದಲ್ಲ; ಸಿಬ್ಬಂದಿಯ ಮಾನವೀಯ ಸ್ಪಂದನೆಯನ್ನೇ ತಮ್ಮ ಪರಾರಿಯ ಅವಕಾಶವಾಗಿ ಬಳಸಿಕೊಂಡಿದ್ದರು ಎಂಬುದು ತನಿಖೆಯ ಪ್ರಾಥಮಿಕ ಚಿತ್ರಣ.
ಘಟನೆಯ ಬಳಿಕ ಜೈಲುಗಳ ಮಹಾನಿರ್ದೇಶಕ ಸಂದೀಪ್ ರೈ ರಾಥೋಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕರ್ತವ್ಯ ಲೋಪದ ಆರೋಪದ ಮೇಲೆ ಒಂಬತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಲಾಯಿತು. ತಪ್ಪಿಸಿಕೊಂಡ ಎಲ್ಲ 17 ಕೈದಿಗಳನ್ನೂ ಅಕ್ಟೋಬರ್ 28ರ ವೇಳೆಗೆ ಮತ್ತೆ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ. ಅಂದರೆ, ಸುಮಾರು 43 ಗಂಟೆಗಳ ಕಾರ್ಯಾಚರಣೆಯ ಬಳಿಕ ಪರಾರಿಯಾದವರೆಲ್ಲರೂ ಪೊಲೀಸರ ಕೈಗೆ ಸಿಕ್ಕಿದ್ದಾರೆ.ಆದರೆ, ಕೈದಿಗಳನ್ನು ಮತ್ತೆ ಸೆರೆಹಿಡಿದಿರುವುದರಿಂದ ಜೈಲಿನ ಭದ್ರತಾ ವೈಫಲ್ಯದ ಪ್ರಶ್ನೆ ಮುಗಿಯುವುದಿಲ್ಲ. ಇಂತಹ ಘಟನೆ ನಡೆಯಲು ಅವಕಾಶ ಸಿಕ್ಕಿದ್ದು ಹೇಗೆ ಎಂಬುದೇ ಈಗ ಮುಖ್ಯ.
ಒಂದೇ ವಾರದಲ್ಲಿ ಹಲವು ಪರಾರಿ ಘಟನೆಗಳು!
ಥೇಣಿಯ ಘಟನೆಗೂ ಮುನ್ನ ಚೆನ್ನೈನ ಪುಳಲ್ ಕೇಂದ್ರ ಕಾರಾಗೃಹದಲ್ಲೂ ಅಕ್ಟೋಬರ್ 20 ಮತ್ತು 21ರಂದು ಇಬ್ಬರು ಕೈದಿಗಳು ತಪ್ಪಿಸಿಕೊಂಡಿದ್ದರು.
ಅಕ್ಟೋಬರ್ 20ರಂದು ಕಿವಿನೋವಿನ ನೆಪವೊಡ್ಡಿ ಜೈಲಿನ ಆಸ್ಪತ್ರೆಯ ಕಡೆಗೆ ಹೋಗಲು ಅನುಮತಿ ಪಡೆದ ನೇಪಾಳ ಮೂಲದ ಕೈದಿ ಸುಧೀಪ್ ಬೊಗಾಟಿ, ಕಾವಲು ಗೋಪುರದ ಬಳಿ ಇದ್ದ ವಿದ್ಯುತ್ ತಂತಿಗಳ ನೆರವಿನಿಂದ ಎತ್ತರದ ಗೋಡೆ ದಾಟಲು ಪ್ರಯತ್ನಿಸಿದ್ದ. ಮೊದಲ ಪ್ರಯತ್ನ ವಿಫಲವಾದರೂ, ಕಾವಲುಗಾರರ ಪಾಳಿ ಬದಲಾವಣೆಯ ಸಮಯದಲ್ಲಿದ್ದ ಅವಕಾಶವನ್ನು ಬಳಸಿಕೊಂಡು ಹೊರಬಂದಿದ್ದ. ಮರುದಿನ ಬೆಳಿಗ್ಗೆ ಆತ ಚಹಾ ಅಂಗಡಿಯೊಂದರ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.ಅಕ್ಟೋಬರ್ 21ರಂದು ಜೈಲಿನ ಹೊರಗಿನ ಮಾರುಕಟ್ಟೆಯಲ್ಲಿ ಅಂಗಡಿ ನಡೆಸಲು ಅನುಮತಿ ಪಡೆದಿದ್ದ ಆರ್. ಸುರೇಶ್ ಜನಸಂದಣಿಯ ನಡುವೆ ತಪ್ಪಿಸಿಕೊಂಡಿದ್ದ. ಮರುದಿನ ಬೆಳಗಿನ ಜಾವ ಕ್ಷೌರಿಕನ ಅಂಗಡಿಯೊಂದರಲ್ಲಿ ಆತನನ್ನು ಬಂಧಿಸಲಾಯಿತು. ಈ ಎರಡೂ ಘಟನೆಗಳ ಬಳಿಕ ಪುಳಲ್ ಜೈಲಿನ ಏಳು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು.
ತಮಿಳುನಾಡಿಗೆ ಜೈಲು ಪರಾರಿ ಹೊಸದಲ್ಲ!
ತಮಿಳುನಾಡಿನ ಜೈಲು ಭದ್ರತೆಯ ವೈಫಲ್ಯದ ಬಗ್ಗೆ ಚರ್ಚೆ ನಡೆಯುತ್ತಿರುವುದು ಇದೇ ಮೊದಲಲ್ಲ. 1995ರ ಆಗಸ್ಟ್‌ನಲ್ಲಿ ವೆಲ್ಲೂರು ಕೋಟೆಯೊಳಗಿನ ವಿಶೇಷ ಜೈಲಿನಿಂದ ಎಲ್‌ಟಿಟಿಇ ಸಂಘಟನೆಯ 43 ಕೈದಿಗಳು ಸುರಂಗ ಕೊರೆದು ಪರಾರಿಯಾಗಿದ್ದರು. ಶೌಚಾಲಯದ ನೆಲದ ಕೆಳಗೆ ಸುರಂಗ ತೋಡಿ, ಚರಂಡಿ ಮಾರ್ಗದ ಮೂಲಕ ಹೊರಬಂದಿದ್ದ ಆ ಘಟನೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು.ಮೂರು ದಶಕಗಳ ಬಳಿಕವೂ ಜೈಲಿನೊಳಗಿನ ನಿಗಾ, ಸಿಬ್ಬಂದಿಯ ಎಚ್ಚರಿಕೆ ಮತ್ತು ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಎದ್ದಿರುವುದು ಗಮನಾರ್ಹ. ಆದರೆ ವೆಲ್ಲೂರು ಘಟನೆಯಲ್ಲಿನ ಸುರಂಗದ ತಂತ್ರಕ್ಕೂ, ಥೇಣಿಯಲ್ಲಿ ನಡೆದ ಸಿಬ್ಬಂದಿಯ ಮೇಲಿನ ದಾಳಿ ಮತ್ತು ಕೀಲಿಗಳನ್ನು ಕಸಿದುಕೊಂಡು ಪರಾರಿಯಾದ ಘಟನೆಗೂ ವ್ಯತ್ಯಾಸವಿದೆ.
ಜೈಲುಗಳಲ್ಲಿನ ಮೂರು ಪ್ರಮುಖ ಲೋಪಗಳು
ಥೇಣಿ ಜೈಲಿನಲ್ಲಿ 200 ಕೈದಿಗಳಿಗೆ ಮಾತ್ರ ಅವಕಾಶವಿದ್ದರೂ, ಘಟನೆ ನಡೆದ ದಿನ 334 ಕೈದಿಗಳಿದ್ದರು. ಅಂದರೆ ಸಾಮರ್ಥ್ಯಕ್ಕಿಂತ ಶೇ.67ರಷ್ಟು ಹೆಚ್ಚು. ಅಷ್ಟೇ ಅಲ್ಲ, ಪರಾರಿಯಾದ 17 ಮಂದಿಯನ್ನೂ ಒಂದೇ ಕೊಠಡಿಯಲ್ಲಿ ಇರಿಸಲಾಗಿತ್ತು ಎಂಬ ವರದಿಗಳಿವೆ. ಜೈಲು ನಿಯಮಗಳ ಪ್ರಕಾರ ಒಂದು ಕೊಠಡಿಯಲ್ಲಿ ಗರಿಷ್ಠ ಐದು ಕೈದಿಗಳನ್ನು ಇರಿಸಬೇಕೆಂಬ ಅಂಶವೂ ಚರ್ಚೆಗೆ ಬಂದಿದೆ.
ಎರಡನೆಯದು ಸಿಬ್ಬಂದಿಯ ಕೊರತೆ. ವರದಿಗಳ ಪ್ರಕಾರ, ಘಟನೆ ನಡೆದ ರಾತ್ರಿ ಅಗತ್ಯಕ್ಕಿಂತ ಕಡಿಮೆ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಕೆಲವು ಕಾವಲು ಗೋಪುರಗಳಲ್ಲಿಯೂ ಸಿಬ್ಬಂದಿ ಇರಲಿಲ್ಲ ಎಂಬ ಆರೋಪಗಳಿವೆ. ಪುಳಲ್ ಜೈಲಿನಲ್ಲಿಯೂ ಪ್ರತಿ ಪಾಳಿಯಲ್ಲಿ ಇರಬೇಕಾದ 60 ಕಾವಲುಗಾರರ ಬದಲಿಗೆ ಕೇವಲ 15 ಮಂದಿ ಇದ್ದರು ಎಂದು ಮದ್ರಾಸ್ ಹೈಕೋರ್ಟ್‌ಗೆ ಸಲ್ಲಿಸಿದ ದಾಖಲೆಗಳು ತಿಳಿಸಿವೆ.
ಮೂರನೆಯದು ಕರ್ತವ್ಯ ಲೋಪ ಮತ್ತು ನಿಯಮ ಪಾಲನೆಯ ವೈಫಲ್ಯ. ಕೈದಿಯೊಬ್ಬನಿಗೆ ಅನಾರೋಗ್ಯವಾದಾಗ ನೆರವಿಗೆ ಧಾವಿಸುವುದು ಸಹಜ. ಆದರೆ ಅದಕ್ಕಾಗಿ ಭದ್ರತಾ ಕ್ರಮಗಳನ್ನೇ ಉಲ್ಲಂಘಿಸುವಂತಿಲ್ಲ. ಜೈಲಿನ ಬಾಗಿಲುಗಳು, ಕೀಲಿಗಳು, ಕಾವಲು ಗೋಪುರಗಳು ಮತ್ತು ಪಾಳಿ ಬದಲಾವಣೆಯ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ, ಸಣ್ಣ ಅವಕಾಶವೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು.
ಭಾರತದ ಇತರ ಜೈಲುಗಳ ಪರಿಸ್ಥಿತಿಯೂ ಆತಂಕಕಾರಿ
ಭಾರತದ ಜೈಲುಗಳ ಸಮಸ್ಯೆ ತಮಿಳುನಾಡಿಗೆ ಮಾತ್ರ ಸೀಮಿತವಾಗಿಲ್ಲ. ಭಾರತ ನ್ಯಾಯ ವರದಿ–2025ರ ಪ್ರಕಾರ, ದೇಶದ ಜೈಲುಗಳಲ್ಲಿ ಅವುಗಳ ಸಾಮರ್ಥ್ಯಕ್ಕಿಂತ ಸರಾಸರಿ ಶೇ.31ರಷ್ಟು ಹೆಚ್ಚು ಕೈದಿಗಳಿದ್ದಾರೆ. ಒಟ್ಟು ಜೈಲುಗಳ ಪೈಕಿ ಶೇ.55ರಷ್ಟು ಜೈಲುಗಳು ಅಧಿಕ ಜನದಟ್ಟಣೆಯಿಂದ ಬಳಲುತ್ತಿವೆ. ದೇಶದ ಕೈದಿಗಳಲ್ಲಿ ಶೇ. 76ರಷ್ಟು ಮಂದಿ ಇನ್ನೂ ವಿಚಾರಣೆ ಎದುರಿಸುತ್ತಿರುವವರೇ ಆಗಿದ್ದಾರೆ.ವೈದ್ಯಕೀಯ ಸೌಲಭ್ಯಗಳ ಕೊರತೆಯೂ ಗಂಭೀರವಾಗಿದೆ. ನಿಯಮದ ಪ್ರಕಾರ 300 ಕೈದಿಗಳಿಗೆ ಒಬ್ಬ ವೈದ್ಯರಿರಬೇಕು. ಆದರೆ ರಾಷ್ಟ್ರೀಯ ಸರಾಸರಿ ಪ್ರಕಾರ 775 ಕೈದಿಗಳಿಗೆ ಒಬ್ಬ ವೈದ್ಯರಿದ್ದಾರೆ. ಜೈಲು ಸಿಬ್ಬಂದಿಯ ಒಟ್ಟು ಹುದ್ದೆಗಳಲ್ಲೂ ಶೇ. 30ರಷ್ಟು ಖಾಲಿ ಇವೆ.ಅಂದರೆ, ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಳ್ಳುವವರೆಗೂ ಕಾಯುತ್ತಿರುವ ಸಾವಿರಾರು ಕೈದಿಗಳು, ಸಿಬ್ಬಂದಿ ಕೊರತೆ ಮತ್ತು ವೈದ್ಯಕೀಯ ಸೌಲಭ್ಯಗಳ ಅಭಾವದ ನಡುವೆ ಬದುಕಬೇಕಾಗಿದೆ.
ಮುಂದೇನು? ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವೇ?
ಥೇಣಿ ಘಟನೆ ಬಳಿಕ ತಮಿಳುನಾಡಿನ ಜೈಲುಗಳಲ್ಲಿ ಭದ್ರತಾ ಪರಿಶೀಲನೆ ಆರಂಭಿಸಲಾಗಿದೆ. ರಾಜ್ಯದ ಎಲ್ಲ 125 ಜೈಲುಗಳಲ್ಲಿ ಭದ್ರತಾ ಲೋಪಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸುವ ಯೋಜನೆ ರೂಪಿಸಲಾಗುತ್ತಿದೆ. ಅಗತ್ಯವಿರುವ ಕಡೆ ಕಾವಲು ಗೋಪುರಗಳಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಪರಾರಿಯಾದ ಕೈದಿಗಳನ್ನು ಇತರ ಜೈಲುಗಳಿಗೆ ಸ್ಥಳಾಂತರಿಸುವ ಕ್ರಮವೂ ಕೈಗೊಳ್ಳಲಾಗಿದೆ.
ಆದರೆ ಕೇವಲ ಸಿಬ್ಬಂದಿಯನ್ನು ಅಮಾನತುಗೊಳಿಸುವುದರಿಂದ ಅಥವಾ ಕಾವಲು ಗೋಪುರಗಳಲ್ಲಿ ಶಸ್ತ್ರಗಳನ್ನು ನಿಯೋಜಿಸುವುದರಿಂದ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವುದಿಲ್ಲ. ಜೈಲುಗಳ ಸಾಮರ್ಥ್ಯ ಹೆಚ್ಚಿಸುವುದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಕೈದಿಗಳನ್ನು ನಿಯಮಾನುಸಾರ ಪ್ರತ್ಯೇಕವಾಗಿ ಇರಿಸುವುದು ಮತ್ತು ಪ್ರತಿಯೊಂದು ಭದ್ರತಾ ಹಂತದಲ್ಲೂ ಹೊಣೆಗಾರಿಕೆಯನ್ನು ಖಚಿತಪಡಿಸುವುದು ಅಗತ್ಯ.
ಜೈಲು ಎಂದರೆ ಕೇವಲ ಅಪರಾಧಿಗಳನ್ನು ಬಂಧಿಸಿಡುವ ಸ್ಥಳವಲ್ಲ; ಕಾನೂನು ಮತ್ತು ನ್ಯಾಯದ ಮೇಲಿನ ಜನರ ನಂಬಿಕೆಯನ್ನು ಕಾಪಾಡುವ ವ್ಯವಸ್ಥೆಯೂ ಹೌದು. ಅಪಸ್ಮಾರದ ನಾಟಕವಾಡಿ 17 ಕೈದಿಗಳು ತಪ್ಪಿಸಿಕೊಂಡು, ಮತ್ತೆ ಪೊಲೀಸರ ಕೈಗೆ ಸಿಕ್ಕಿರುವ ಈ ಘಟನೆ ಒಂದು ಎಚ್ಚರಿಕೆಯ ಗಂಟೆ. ಇಂತಹ ಘಟನೆ ಮರುಕಳಿಸದಂತೆ ತಮಿಳುನಾಡು ಮಾತ್ರವಲ್ಲ, ದೇಶದ ಎಲ್ಲ ಜೈಲುಗಳಲ್ಲೂ ವ್ಯವಸ್ಥಿತ ಸುಧಾರಣೆ ನಡೆಯಬೇಕಿದೆ.



















