ಶಿವಪುರಿ : ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವೈಭೋಗದ ಜೀವನ, ಚಿನ್ನಾಭರಣ ಹಾಗೂ ನಗದು ಹಣವನ್ನು ಪ್ರದರ್ಶನ ಮಾಡಿದ್ದೇ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಮಹಿಳಾ ಯೂಟ್ಯೂಬರ್‌ವೊಬ್ಬರಿಗೆ ಮುಳ್ಳಾಗಿ ಪರಿಣಮಿಸಿದೆ. ತಾವೇ ಅಪ್ಲೋಡ್ ಮಾಡಿದ್ದ ವಿಡಿಯೋಗಳನ್ನು ಆಧರಿಸಿ ಸ್ಕೆಚ್ ಹಾಕಿದ ಕಳ್ಳರ ತಂಡವೊಂದು, ಯೂಟ್ಯೂಬರ್ ಮನೆಗೆ ನುಗ್ಗಿ ಸುಮಾರು 8 ರಿಂದ 10 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಮತ್ತು ನಗದನ್ನು ದೋಚಿ ಪರಾರಿಯಾಗಿದೆ.
ಮಧ್ಯರಾತ್ರಿ ಸಿನಿಮಾ ಶೈಲಿಯ ದರೋಡೆ
ಶಿವಪುರಿ ಜಿಲ್ಲೆಯ ಮೋಹಿನಿ ಗ್ರಾಮದ ನಿವಾಸಿ, ಪ್ರಸಿದ್ಧ ಯೂಟ್ಯೂಬರ್ ರಚನಾ ಗುರ್ಜರ್ ಅವರ ಮನೆಯಲ್ಲಿ ಶನಿವಾರ ಮುಂಜಾನೆ ಈ ಘಟನೆ ನಡೆದಿದೆ. ಮುಂಜಾನೆ ಸುಮಾರು 2 ಗಂಟೆಯ ಸುಮಾರಿಗೆ ಮನೆಗೆ ನುಗ್ಗಿದ ಕಳ್ಳರು, ಗಾಢ ನಿದ್ರೆಯಲ್ಲಿದ್ದ ರಚನಾ ಮತ್ತು ಅವರ ಕುಟುಂಬಸ್ಥರನ್ನು ಒಂದು ಕೊಠಡಿಯಲ್ಲಿ ಹಾಕಿ ಹೊರಗಿನಿಂದ ಲಾಕ್ ಮಾಡಿದ್ದಾರೆ. ಆ ನಂತರ ಇಡೀ ಮನೆಯನ್ನು ಜಾಲಾಡಿ ಚಿನ್ನ, ಬೆಳ್ಳಿ, ನಗದು ಹಣ ಹಾಗೂ ಅಚ್ಚರಿಯೆಂಬಂತೆ ಎನರ್ಜಿ ಡ್ರಿಂಕ್ಸ್ ತುಂಬಿದ್ದ ಬಾಕ್ಸ್ ಅನ್ನೂ ಹೊತ್ತೊಯ್ದಿದ್ದಾರೆ. ಮುಂಜಾನೆ 4 ಗಂಟೆಗೆ ಎಚ್ಚರಗೊಂಡು ರೂಂ ಲಾಕ್ ಆಗಿರುವುದನ್ನು ಗಮನಿಸಿದ ಕುಟುಂಬಸ್ಥರು, ಸಂಬಂಧಿಕರಿಗೆ ಕರೆ ಮಾಡಿ ತಮ್ಮನ್ನು ರಕ್ಷಿಸುವಂತೆ ಕೋರಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳ ದಿಕ್ಕು ಬದಲಿಸಿದ ಖದೀಮರು
ದರೋಡೆಗೆ ಮುನ್ನ ಕಳ್ಳರು ಅತ್ಯಂತ ಚಾಣಾಕ್ಷತನದಿಂದ ವರ್ತಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಮುಖಕ್ಕೆ ಮುಸುಕು ಧರಿಸಿದ್ದ ಕಳ್ಳನೊಬ್ಬ ಲಾಠಿಯ ಸಹಾಯದಿಂದ ಮನೆಯ ಸಿಸಿಟಿವಿ ಕ್ಯಾಮೆರಾಗಳ ಕೋನವನ್ನು (Angle) ಬದಲಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಮ್ಮ ಗುರುತು ಸಿಗಬಾರದೆಂಬ ಕಾರಣಕ್ಕೆ ಕಳ್ಳರು ಈ ಪ್ಲಾನ್ ಮಾಡಿದ್ದರು. ಸದ್ಯ ನರವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳೀಯರೇ ಅಥವಾ ಪರಿಚಯಸ್ಥರೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಶಿವಪುರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಮುಲೆ ತಿಳಿಸಿದ್ದಾರೆ.
ದರೋಡೆಗೆ ನೆರವಾದ ಯೂಟ್ಯೂಬ್ ವಿಡಿಯೋಗಳು!
ಸಾಮಾಜಿಕ ಜಾಲತಾಣಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ರಚನಾ ಗುರ್ಜರ್, ಇತ್ತೀಚೆಗಷ್ಟೇ ತಮ್ಮ ಐಷಾರಾಮಿ ಜೀವನದ ವಿಡಿಯೋಗಳನ್ನು ಹಂಚಿಕೊಂಡಿದ್ದರು. ತಮ್ಮ ಇಡೀ ಮನೆಯನ್ನು ಪರಿಚಯಿಸುವ ‘ಹೋಮ್ ಟೂರ್’ ವಿಡಿಯೋ ಮಾಡಿದ್ದ ಅವರು, ಮನೆಯ ಪ್ರತಿಯೊಂದು ಕೊಠಡಿ ಹಾಗೂ ಪ್ರವೇಶ ದ್ವಾರಗಳನ್ನು ತೋರಿಸಿದ್ದರು.
ಮತ್ತೊಂದು ವಿಡಿಯೋದಲ್ಲಿ ತಮ್ಮಲ್ಲಿದ್ದ ಕಂತೆ ಕಂತೆ ಹಣ ಹಾಗೂ ಬೆಲೆಬಾಳುವ ಚಿನ್ನಾಭರಣಗಳನ್ನು ಮೇಜಿನ ಮೇಲಿಟ್ಟು ಪ್ರದರ್ಶಿಸಿದ್ದರು. ಕಳ್ಳರು ಇದೇ ವಿಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸಿ, ಮನೆಯ ನಕ್ಷೆ ಹಾಗೂ ಒಡವೆ ಇಟ್ಟಿರುವ ಜಾಗವನ್ನು ಖಾತರಿಪಡಿಸಿಕೊಂಡು ಕರಾರುವಾಕ್ಕಾಗಿ ಈ ದರೋಡೆ ನಡೆಸಿದ್ದಾರೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಆನ್‌ಲೈನ್‌ನಲ್ಲಿ ಪ್ರದರ್ಶಿಸಿದ ಶ್ರೀಮಂತಿಕೆ ದರೋಡೆಕೋರರಿಗೆ ದಾರಿದೀಪವಾದ ಈ ಘಟನೆ, ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಬೇಕು ಎಂಬುದನ್ನು ಮತ್ತೊಮ್ಮೆ ಸಾರಿಹೇಳಿದೆ.
ಇದನ್ನೂ ಓದಿ : ಚೊಚ್ಚಲ ಟೆಸ್ಟ್‌ನಲ್ಲಿ ಮಾನವ್ ಸುತಾರ್ ದಾಖಲೆ ; ಹಿರಿಯರ ಪಟ್ಟಿಗೆ ಸೇರ್ಪಡೆ



















