ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೊ ದರ ಏರಿಕೆ ಮಾಡಿದೆ. ಹೊಸ ಮನೆ ಕಟ್ಟಿಸಬೇಕು, ಫ್ಲ್ಯಾಟ್ ಖರೀದಿಸಬೇಕು ಎಂಬ ಕನಸು ಹೊಂದಿದವರು ಬಡ್ಡಿದರ ಏರಿಕೆಯಿಂದ ನಿರಾಶರಾಗಿದ್ದಾರೆ. ಆದರೂ, ಸಾರ್ವಜನಿಕ ವಲಯದ ಬ್ಯಾಂಕುಗಳು ಮನೆ ಖರೀದಿಸುವ ಕನಸು ಕಾಣುತ್ತಿರುವ ಗ್ರಾಹಕರಿಗೆ ಸಿಹಿಸುದ್ದಿಯೊಂದು ನೀಡಿವೆ. ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಶೇ.7ರಿಂದ ಬಡ್ಡಿ ದರಗಳನ್ನು ಆರಂಭಿಸಿವೆ. ಹಾಗಾಗಿ, ಸಾಲ ಪಡೆಯುವ ಮುನ್ನ ಗ್ರಾಹಕರು ವಿವಿಧ ಬ್ಯಾಂಕ್ ಗಳ ಬಡ್ಡಿ ದರಗಳು, ಸಾಲದ ಮಿತಿಗಳು ಮತ್ತು ಇತರ ಶುಲ್ಕಗಳನ್ನು ಹೋಲಿಕೆ ಮಾಡಿ ನಿರ್ಧಾರ ಕೈಗೊಳ್ಳುವುದು ಸೂಕ್ತವಾಗಿದೆ.
ಬ್ಯಾಂಕ್ ಗಳಿಂದ ವಿಧಿಸಲಾಗುವ ಅಂತಿಮ ಬಡ್ಡಿ ದರವು ಸಾಲಗಾರರ ಕ್ರೆಡಿಟ್ ಸ್ಕೋರ್, ಸಾಲದ ಮೊತ್ತ, ಹಿಂದಿನ ಸಾಲದ ಇತಿಹಾಸ ಹಾಗೂ ಇತರ ಪ್ರಮುಖ ಅಂಶಗಳನ್ನು ಅವಲಂಬಿಸಿರುತ್ತದೆ. ಸದ್ಯ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಗಳು ವಿಧಿಸುತ್ತಿರುವ ಗೃಹ ಸಾಲದ ಬಡ್ಡಿ ದರಗಳ ವಿವರ ಮೂರು ಹಂತಗಳ ಸಾಲದ ಮೊತ್ತದ (30 ಲಕ್ಷ ರೂ.ವರೆಗೆ, 30 ಲಕ್ಷದಿಂದ 75 ಲಕ್ಷ ರೂ.ವರೆಗೆ ಮತ್ತು 75 ಲಕ್ಷ ರೂ.ಗಿಂತ ಹೆಚ್ಚು) ಆಧಾರದ ಮೇಲೆ ಕೆಳಗಿನಂತಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ: ಎಲ್ಲ ಮೂರು ಸಾಲದ ಸ್ಲ್ಯಾಬ್ ಗಳಲ್ಲಿ ಶೇ.7ರಿಂದ ಶೇ.9.90ರವರೆಗೆ ಬಡ್ಡಿ ದರ ಲಭ್ಯವಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಎಲ್ಲ ಸ್ಲ್ಯಾಬ್ ಗಳಲ್ಲಿ ಶೇ. 7 ರಿಂದ ಶೇ.9.15ರವರೆಗೆ ಬಡ್ಡಿ ದರ ನಿಗದಿಪಡಿಸಲಾಗಿದೆ.
ಬ್ಯಾಂಕ್ ಆಫ್ ಇಂಡಿಯಾ: ಶೇ.7.10 ರಿಂದ ಶೇ. 10.25 ರವರೆಗೆ.
ಇಂಡಿಯನ್ ಬ್ಯಾಂಕ್: ಶೇ. 7.15 ರಿಂದ ಶೇ. 9.15 ರವರೆಗೆ.
ಯುಸಿಒ ಬ್ಯಾಂಕ್: ಶೇ. 7.15 ರಿಂದ ಶೇ. 9.25 ರವರೆಗೆ (ಮಹಿಳಾ ಸಾಲಗಾರರಿಗೆ ಶೇ. 0.05 ಹಾಗೂ ಟೇಕ್ ಓವರ್ ಸಾಲಗಳಿಗೆ ಶೇ. 0.10 ರಿಯಾಯಿತಿ ಲಭ್ಯ).
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಶೇ.7.15 ರಿಂದ ಶೇ.9.60ರವರೆಗೆ (ವಿಮಾ ಪಾಲಿಸಿ ಆಯ್ಕೆ ಮಾಡಿಕೊಳ್ಳುವವರಿಗೆ ಶೇ. 0.05 ರಿಯಾಯಿತಿ).
ಬ್ಯಾಂಕ್ ಆಫ್ ಬರೋಡಾ: ಶೇ. 7.20 ರಿಂದ ಶೇ. 9.25 ರವರೆಗೆ.
ಇಂಡಿಯನ್ ಓವರ್ ಸೀಸ್ ಬ್ಯಾಂಕ್: ಶೇ. 7.20 ರಿಂದ ಆರಂಭ.
ಕೆನರಾ ಬ್ಯಾಂಕ್: 30 ಲಕ್ಷ ರೂ.ವರೆಗೆ ಶೇ. 7.25, ಹೆಚ್ಚಿನ ಮೊತ್ತಕ್ಕೆ ಶೇ.7.15ರಿಂದ ಆರಂಭ.
ಪಂಜಾಬ್ ನ್ಯಾಷನಲ್ ಬ್ಯಾಂಕ್: ಶೇ. 7.20 ರಿಂದ ಶೇ. 9.25 ರವರೆಗೆ.
ಭಾರತೀಯ ಸ್ಟೇಟ್ ಬ್ಯಾಂಕ್ : ಶೇ.7.25ರಿಂದ ಶೇ.8.55ರವರೆಗೆ.
ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್: ಶೇ.7.35ರಿಂದ ಶೇ.10.75 ರವರೆಗೆ.
ಗ್ರಾಹಕರು ಗಮನಿಸಬೇಕಾದ ಮುಖ್ಯ ಅಂಶಗಳು
ಕೇವಲ ಪ್ರಮುಖ ಬಡ್ಡಿ ದರವನ್ನು ಮಾತ್ರ ನೋಡದೆ, ಪ್ರೊಸೆಸಿಂಗ್ ಫೀಸ, ಮರುಪಾವತಿ ಅವಧಿ ಮತ್ತು ಇತ್ಯಾದಿ ಹೆಚ್ಚುವರಿ ಶುಲ್ಕಗಳನ್ನು ಪರಿಗಣಿಸಬೇಕು. ಕಡಿಮೆ ಬಡ್ಡಿ ದರದ ಜಾಹೀರಾತುಗಳು ಎಲ್ಲರಿಗೂ ಅನ್ವಯವಾಗಬೇಕೆಂದಿಲ್ಲ ಇದು ಗ್ರಾಹಕರ ಆದಾಯ ಮತ್ತು ಕ್ರೆಡಿಟ್ ಸ್ಕೋರ್ ಆಧರಿಸಿ ಬದಲಾಗುತ್ತದೆ. ಗೃಹ ಸಾಲದ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲಗಳಿದ್ದರೆ ನುರಿತ ಹಣಕಾಸು ಸಲಹೆಗಾರರ ಮಾರ್ಗದರ್ಶನ ಪಡೆಯುವುದು ಉತ್ತಮ.
ಇದನ್ನೂ ಓದಿ :ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ನೇಮಕಾತಿ: 46 ಸಾವಿರ ರೂ. ಸಂಬಳ !


















