ಬೆಂಗಳೂರು : ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೆ ಮಾಡಿದ ಹಿನ್ನೆಲೆ ಸಾಮಾಜಿಕ ಹೋರಾಟಗಾರ ಹರೀಶ್ ಬೈರಪ್ಪ ಅವರಿಗೆ ಎಸ್.ಜೆ. ಪಾರ್ಕ್ ಪೊಲೀಸರು ತಿಳುವಳಿಕೆ ನೋಟಿಸ್ ಜಾರಿ ಮಾಡಿದ್ದಾರೆ.
ಟೌನ್ ಹಾಲ್ ಮುಂಭಾಗದಲ್ಲಿ ಶಾಂತಿಯುತ ಮಾನವ ಸರಪಳಿ ಹಾಗೂ ಸಭೆ ನಡೆಸಲು ಕರೆ ನೀಡಿದ್ದ ಪೋಸ್ಟ್ಗಳನ್ನು ಹರೀಶ್ ಬೈರಪ್ಪ ಹಂಚಿಕೊಂಡಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ಟೌನ್ ಹಾಲ್ ಪ್ರದೇಶದಲ್ಲಿ ಕಾರ್ಯಕ್ರಮ ನಡೆದರೆ ಆ್ಯಂಬುಲೆನ್ಸ್ ಸಂಚಾರ, ಸಾರ್ವಜನಿಕರ ಓಡಾಟ ಹಾಗೂ ಒಳಾಂಗಣ ಕಾರ್ಯಕ್ರಮಗಳಿಗೆ ಆಗಮಿಸುವವರಿಗೆ ತೊಂದರೆ ಉಂಟಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಭೆಗೆ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಟೌನ್ ಹಾಲ್ ಸುತ್ತಮುತ್ತ ಭದ್ರತೆ ಕಟ್ಟು ನಿಟ್ಟಾಗಿಸಲಾಗಿದ್ದು, ಎರಡು ಕೆಎಸ್ಆರ್ಪಿ ತುಕಡಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ರಸ್ತೆ ಭಾಗದಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ.
ಸಭೆಗೆ ಆಗಮಿಸುವವರನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡ ಕೆಲವರಿಗೆ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ದೊರೆತಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಎರಡು ಬಿಎಂಟಿಸಿ ಬಸ್ಗಳನ್ನು ಸಹ ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎನ್ನಲಾಗಿದೆ. ಟೌನ್ ಹಾಲ್ ಬಳಿ ಯಾವುದೇ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಯಾರಾದರೂ ಬಂದರೆ ಅವರನ್ನು ವಶಕ್ಕೆ ಪಡೆದು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.


















