ಮಲ್ಲನ್ಪುರ : ಐಪಿಎಲ್ 2026ರ ಎಲಿಮಿನೇಟರ್ ಪಂದ್ಯವು ಐತಿಹಾಸಿಕ ಹಾಗೂ ರೋಚಕ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಬುಧವಾರ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 97 ರನ್ ಚಚ್ಚುವ ಮೂಲಕ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿದ್ದಾರೆ. ಕೇವಲ ಮೂರು ರನ್‌ಗಳ ಅಂತರದಿಂದ ಐಪಿಎಲ್ ಇತಿಹಾಸದ ಅತಿ ವೇಗದ ಶತಕದ ದಾಖಲೆಯನ್ನು ವಂಚಿತರಾಗಿ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದ್ದಾರೆ.
ಕೈತಪ್ಪಿದ ಕ್ರಿಸ್ ಗೇಲ್ ಅವರ ಅತಿ ವೇಗದ ಶತಕದ ದಾಖಲೆ
13 ವರ್ಷಗಳ ಹಿಂದೆ ಕೇವಲ 30 ಎಸೆತಗಳಲ್ಲಿ ಅತಿ ವೇಗದ ಐಪಿಎಲ್ ಶತಕ ಸಿಡಿಸಿ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ನಿರ್ಮಿಸಿದ್ದ ದಾಖಲೆಯನ್ನು ಮುರಿಯುವ ಸುವರ್ಣಾವಕಾಶ ಯುವ ಆಟಗಾರ ವೈಭವ್ ಮುಂದಿತ್ತು. 28 ಎಸೆತಗಳಲ್ಲಿ 97 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಈ ಪ್ರತಿಭಾವಂತ ಆಟಗಾರ ಇನ್ನೊಂದು ಬೌಂಡರಿ ಸಿಡಿಸಿದ್ದರೆ ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ದಾಖಲೆಯೊಂದು ನಿರ್ಮಾಣವಾಗುತ್ತಿತ್ತು. ಆದರೆ ಎಂಟನೇ ಓವರ್‌ನಲ್ಲಿ ಡೀಪ್ ಥರ್ಡ್ ಮ್ಯಾನ್‌ನತ್ತ ಕ್ಯಾಚ್ ನೀಡಿ ಔಟಾಗುವ ಮೂಲಕ ಈ ಸುವರ್ಣ ಅವಕಾಶವನ್ನು ಕೈಚೆಲ್ಲಿದರು. ಶತಕ ವಂಚಿತರಾದರೂ, ಔಟಾಗುವ ಕೆಲವು ನಿಮಿಷಗಳ ಮುನ್ನ ಐಪಿಎಲ್ ಸೀಸನ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ ಅವರ ಮತ್ತೊಂದು ಬಹುದೊಡ್ಡ ದಾಖಲೆಯನ್ನು ವೈಭವ್ ತಮ್ಮ ಹೆಸರಿಗೆ ಬರೆದುಕೊಂಡಿರುವುದು ವಿಶೇಷ.
ಪ್ರಫುಲ್ ಹಿಂಗೆ ಓವರ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್
ಎಲಿಮಿನೇಟರ್‌ನಂತಹ ತೀವ್ರ ಒತ್ತಡದ ಪಂದ್ಯದಲ್ಲಿ ಪಾಟ್ ಕಮಿನ್ಸ್ ನೇತೃತ್ವದ ಬಲಿಷ್ಠ ಹೈದರಾಬಾದ್ ಬೌಲಿಂಗ್ ದಾಳಿಯನ್ನು ವೈಭವ್ ಅಕ್ಷರಶಃ ಧೂಳೀಪಟ ಮಾಡಿದರು. ಇವರ ಈ ಸ್ಪೋಟಕ ಇನಿಂಗ್ಸ್‌ನಲ್ಲಿ ಬರೋಬ್ಬರಿ 12 ಭರ್ಜರಿ ಸಿಕ್ಸರ್‌ಗಳು ಮೂಡಿಬಂದವು. ಎಂಟನೇ ಓವರ್ ಆರಂಭಕ್ಕೂ ಮುನ್ನ 23 ಎಸೆತಗಳಲ್ಲಿ 71 ರನ್ ಗಳಿಸಿದ್ದರು. ಈ ವೇಳೆ ಬೌಲಿಂಗ್ ಮಾಡಲು ಬಂದದ್ದು ಪ್ರಫುಲ್ ಹಿಂಗೆ. ತಮ್ಮ ಚೊಚ್ಚಲ ಐಪಿಎಲ್ ಓವರ್‌ನಲ್ಲೇ ವೈಭವ್ ವಿಕೆಟ್ ಪಡೆದು ಸಂಭ್ರಮಿಸಿದ್ದ ಹಿಂಗೆ ವಿರುದ್ಧ ಸೇಡು ತೀರಿಸಿಕೊಳ್ಳುವ ಮೂಡ್‌ನಲ್ಲಿದ್ದ ಯುವ ಆಟಗಾರ, ಆ ಓವರ್‌ನಲ್ಲಿ ಬರೋಬ್ಬರಿ 3 ಸಿಕ್ಸರ್ ಹಾಗೂ 2 ಬೌಂಡರಿಗಳನ್ನು ಚಚ್ಚಿದರು. 97 ರನ್ ತಲುಪಿದ ಬಳಿಕ ಬೌನ್ಸರ್ ಎಸೆತವನ್ನು ಅಪ್ಪರ್ ಕಟ್ ಮಾಡಲು ಹೋಗಿ ಸ್ಮರಣ್ ರವಿಚಂದ್ರನ್ ಕೈಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಮೈದಾನದಲ್ಲೇ ನಿಬ್ಬೆರಗಾಗಿ ನಿಂತ ಯುವ ಪ್ರತಿಭೆ
ಆ ಇಡೀ ಸಂಜೆ ಹೈದರಾಬಾದ್‌ನ ಯಾವುದೇ ಬೌಲರ್‌ನಿಂದಲೂ ವೈಭವ್ ಅವರನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಹೀಗಿರುವಾಗ ತಮ್ಮ ವಿಕೆಟ್ ಪತನವನ್ನು ಸ್ವತಃ ವೈಭವ್ ಅವರಿಗೇ ನಂಬಲು ಸಾಧ್ಯವಾಗಲಿಲ್ಲ. ಔಟಾದ ಬಳಿಕ ಸುಮಾರು 10 ಸೆಕೆಂಡ್‌ಗಳ ಕಾಲ ಮೈದಾನದಲ್ಲೇ ಹೆಪ್ಪುಗಟ್ಟಿದಂತೆ ನಿಂತುಬಿಟ್ಟರು. ಕೇವಲ ಮೂರು ರನ್‌ಗಳಿಂದ ಐತಿಹಾಸಿಕ ದಾಖಲೆ ಕೈತಪ್ಪಿದ್ದನ್ನು ಅರಗಿಸಿಕೊಳ್ಳಲಾಗದೆ ತೀವ್ರ ನಿರಾಸೆಯಿಂದ ಮೈದಾನದಿಂದ ಹೆಜ್ಜೆ ಹಾಕಿದರು. ಈ ವೇಳೆ ಹೈದರಾಬಾದ್ ಆಟಗಾರ ಅಭಿಷೇಕ್ ಶರ್ಮಾ ಓಡಿಬಂದು ಬೆನ್ನು ತಟ್ಟಿ ಸಾಂತ್ವನ ಹೇಳಿದರು. ಕ್ರೀಸ್‌ಗೆ ಬರುತ್ತಿದ್ದ ಮೂರನೇ ಕ್ರಮಾಂಕದ ಬ್ಯಾಟರ್ ಧ್ರುವ್ ಜುರೆಲ್ ಕೂಡ ಯುವ ಆಟಗಾರನಿಗೆ ಸಮಾಧಾನ ಪಡಿಸಿದರು.
ವೈಭವ್ ಅವರ ಈ ಅದ್ಭುತ ಆಟಕ್ಕೆ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರು ಮತ್ತು ರಾಜಸ್ಥಾನ್ ರಾಯಲ್ಸ್ ಡಗೌಟ್ ಎದ್ದು ನಿಂತು ಗೌರವ (Standing Ovation) ಸಲ್ಲಿಸಿತು. ಇಡೀ ಕ್ರೀಡಾಂಗಣವೇ ಅವರ ಆಟವನ್ನು ಸಂಭ್ರಮಿಸುತ್ತಿದ್ದರೆ, ವೈಭವ್ ಮಾತ್ರ ಕೈತಪ್ಪಿದ ಆ ಮೂರು ರನ್‌ಗಳಿಗಾಗಿ ಮರುಗುತ್ತಿದ್ದರು. ಆದರೂ, ಕೇವಲ 15 ವರ್ಷದ ಬಾಲಕನೊಬ್ಬ ಐಪಿಎಲ್‌ನಂತಹ ಮಹಾಸಮರದಲ್ಲಿ ತೋರಿದ ಈ ರುದ್ರರೌದ್ರಾವತಾರ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಉಳಿಯಲಿದೆ.
ಇದನ್ನೂ ಓದಿ : ರಾಜ್ಯದ ಚಿತ್ತ ಸಿಎಂ ‘ಬ್ರೇಕ್ ಫಾಸ್ಟ್ ಮೀಟಿಂಗ್’ ನತ್ತ – ಇಂದೇ ರಾಜೀನಾಮೆ ನಿರ್ಧಾರ ಪ್ರಕಟಿಸ್ತಾರಾ ಸಿದ್ದರಾಮಯ್ಯ?



















