ಬೆಂಗಳೂರು : ಭಾರತ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿಯಲ್ಲಿ ಮತ್ತೊಮ್ಮೆ ಮಹತ್ವದ ಬದಲಾವಣೆ ನಡೆದಿದೆ. ಕಳೆದ ಕೆಲವು ತಿಂಗಳುಗಳಿಂದ ತಂಡದ ಪ್ರದರ್ಶನದ ಬಗ್ಗೆ ಹೆಚ್ಚುತ್ತಿರುವ ಟೀಕೆಗಳು ಹಾಗೂ ಬಿಸಿಸಿಐ ನಡೆಸುತ್ತಿರುವ ಕಾರ್ಯಕ್ಷಮತೆಯ ಮೌಲ್ಯಮಾಪನದ ನಡುವೆಯೇ, ಭಾರತದ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಸೇವೆಯನ್ನು ಕೊನೆಗೊಳಿಸಿರುವುದಾಗಿ ವರದಿಯಾಗಿದೆ. ಇದರಿಂದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ ತಂಡದಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ನಡೆದಂತಾಗಿದೆ. ಈ ಬೆಳವಣಿಗೆ ಭಾರತೀಯ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮತ್ತೆ ವಿದಾಯ ಹೇಳಿದ ಬಿಸಿಸಿಐ
ಟಿ. ದಿಲೀಪ್ ಅವರನ್ನು ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನದ ಬಳಿಕ ಹುದ್ದೆಯಿಂದ ಕೈಬಿಡಲಾಗಿತ್ತು. ಬಳಿಕ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಬಿಸಿಸಿಐ ಅನಿರೀಕ್ಷಿತವಾಗಿ ಅವರನ್ನು ಮತ್ತೆ ಫೀಲ್ಡಿಂಗ್ ಕೋಚ್ ಆಗಿ ನೇಮಿಸಿತ್ತು. ಆದರೆ ಇದೀಗ ಮತ್ತೊಮ್ಮೆ ಅವರೊಂದಿಗೆ ಒಪ್ಪಂದವನ್ನು ಮುಂದುವರಿಸದಿರುವ ನಿರ್ಧಾರ ಕೈಗೊಂಡಿರುವುದು ಗಮನ ಸೆಳೆದಿದೆ. ಹೀಗಾಗಿ ಕೆಲವೇ ತಿಂಗಳ ಅಂತರದಲ್ಲಿ ದಿಲೀಪ್ ಅವರಿಗೆ ಎರಡನೇ ಬಾರಿ ಹಿನ್ನಡೆಯಾಗಿದೆ.
ಇಂಗ್ಲೆಂಡ್ ಪ್ರವಾಸದ ಬಳಿಕ ಪರಿಶೀಲನೆ
ಭಾರತ ತಂಡದ ಇಂಗ್ಲೆಂಡ್ ಪ್ರವಾಸದಲ್ಲಿ ವಿಶೇಷವಾಗಿ ಟಿ20 ಸರಣಿಯಲ್ಲಿ ಕಂಡುಬಂದ ನಿರಾಸಾದಾಯಕ ಪ್ರದರ್ಶನದ ನಂತರ ಬಿಸಿಸಿಐ ತಂಡದ ಕಾರ್ಯವೈಖರಿಯನ್ನು ಸಮಗ್ರವಾಗಿ ಪರಿಶೀಲಿಸಲು ಮುಂದಾಗಿದೆ. ಬ್ಯಾಟಿಂಗ್, ಫೀಲ್ಡಿಂಗ್ ಹಾಗೂ ಒಟ್ಟಾರೆ ತಂಡದ ಸಿದ್ಧತೆ ಕುರಿತು ಆಡಳಿತ ಮಂಡಳಿ ಆಂತರಿಕ ವಿಮರ್ಶೆ ನಡೆಸುತ್ತಿದೆ. ಈ ಮೌಲ್ಯಮಾಪನದ ಭಾಗವಾಗಿಯೇ ಸಹಾಯಕ ಸಿಬ್ಬಂದಿಯಲ್ಲಿ ಬದಲಾವಣೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ವರದಿಗಳು ತಿಳಿಸಿವೆ.
ದಿಲೀಪ್ ಕೊಡುಗೆ ಏನು?
ಟಿ. ದಿಲೀಪ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಹಲವು ವರ್ಷಗಳ ಅನುಭವ ಹೊಂದಿದ್ದರು. ಯುವ ಆಟಗಾರರೊಂದಿಗೆ ಕೆಲಸ ಮಾಡಿದ ಅನುಭವದ ಆಧಾರದಲ್ಲಿ ಅವರು ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ಭಾರತದ ಸ್ಲಿಪ್ ಕ್ಯಾಚಿಂಗ್ ಮತ್ತು ಫೀಲ್ಡಿಂಗ್ ಮಾನದಂಡದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತ್ತು ಎಂಬ ಪ್ರಶಂಸೆಯೂ ಅವರಿಗೆ ಲಭಿಸಿತ್ತು. ತಂಡದಲ್ಲಿ ಫೀಲ್ಡಿಂಗ್‌ಗೆ ಹೊಸ ರೀತಿಯ ಪ್ರಶಸ್ತಿ ಪದ್ಧತಿ ಹಾಗೂ ಉತ್ಸಾಹ ತುಂಬುವ ಪ್ರಯತ್ನಗಳ ಮೂಲಕ ಅವರು ಆಟಗಾರರ ಮೆಚ್ಚುಗೆಯನ್ನೂ ಗಳಿಸಿದ್ದರು.
ಬಿಸಿಸಿಐ ಸಂದೇಶ ಸ್ಪಷ್ಟ
ಇತ್ತೀಚಿನ ದಿನಗಳಲ್ಲಿ ಬಿಸಿಸಿಐ ತಂಡದ ಪ್ರದರ್ಶನದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ ಎಂಬ ಸಂದೇಶವನ್ನು ನೀಡುತ್ತಿದೆ. ಫಲಿತಾಂಶಗಳು ನಿರೀಕ್ಷಿತ ಮಟ್ಟದಲ್ಲಿ ಬರದಿದ್ದರೆ ಆಟಗಾರರಷ್ಟೇ ಅಲ್ಲ, ಕೋಚಿಂಗ್ ಸಿಬ್ಬಂದಿಯೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನಿಲುವನ್ನು ಮಂಡಳಿ ಅನುಸರಿಸುತ್ತಿದೆ. ಇದೇ ಕಾರಣದಿಂದ ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ಬಳಿಕವೂ ಸಹಾಯಕ ಕೋಚ್ ಅಭಿಷೇಕ್ ನಾಯರ್, ಟಿ. ದಿಲೀಪ್ ಸೇರಿದಂತೆ ಹಲವರನ್ನು ವಿದಾಯ ಹೇಳಲಾಗಿತ್ತು. ಈಗ ಮತ್ತೆ ಕೋಚಿಂಗ್ ತಂಡದಲ್ಲಿ ಬದಲಾವಣೆ ನಡೆದಿರುವುದು ಇದೇ ನೀತಿಯ ಮುಂದುವರಿದ ಭಾಗವೆಂದು ವಿಶ್ಲೇಷಿಸಲಾಗುತ್ತಿದೆ.
ಮುಂದಿನ ಕೋಚ್ ಯಾರು?
ಟಿ. ದಿಲೀಪ್ ಅವರ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬುದನ್ನು ಬಿಸಿಸಿಐ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಭಾರತ ತಂಡದ ಮುಂದಿನ ಪ್ರಮುಖ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಹೊಸ ಫೀಲ್ಡಿಂಗ್ ಕೋಚ್ ನೇಮಕವಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ತಂಡದ ಕೋಚಿಂಗ್ ವ್ಯವಸ್ಥೆಯಲ್ಲಿ ಇನ್ನಷ್ಟು ಬದಲಾವಣೆಗಳು ನಡೆಯುವ ಸಾಧ್ಯತೆಯೂ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ : ಧೋನಿ ದಾಖಲೆ ಮುರಿದ ಬಟ್ಲರ್ ; ಭಾರತದ ವಿರುದ್ಧ ಸಿಡಿಲಬ್ಬರದ ಶತಕದೊಂದಿಗೆ ಹೊಸ ಇತಿಹಾಸ!



















