ವಿಶಾಖಪಟ್ಟಣ : ಇಲ್ಲಿನ ಉಕ್ಕು ಸ್ಥಾವರದಲ್ಲಿ (RINL) ಭಾರೀ ಪ್ರಮಾಣದ ಕರಗಿದ ಲೋಹ ಹರಿದು ಸಾವನ್ನಪ್ಪಿದ್ದ 8 ಮಂದಿ ಕಾರ್ಮಿಕರ ಕುಟುಂಬಸ್ಥರಿಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಸೋಮವಾರ (ಜೂ.8) ರಾತ್ರಿ ವಿಶಾಖಪಟ್ಟಣದ ಉಕ್ಕು ಸ್ಥಾವರದಲ್ಲಿ ಟನ್‌ಗಳಷ್ಟು ಕರಗಿದ ಲೋಹವಿದ್ದ ದೊಡ್ಡ ಗಾತ್ರದ ಬಕೆಟ್ ಉರುಳಿ ಬಿದ್ದಿದೆ. ಇದರಿಂದ ಸ್ಥಾವರದ ಉಕ್ಕಿನ ಕರಗುವ ಕೇಂದ್ರ ಸಂಖ್ಯೆ 1ರಲ್ಲಿ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದು, ಪರಿಣಾಮ ಕಾರ್ಮಿಕರು ಸಾವನಪ್ಪಿದ್ದಾರೆ.
ತಡರಾತ್ರಿ 1:30ರ ಸುಮಾರಿಗೆ ದುರಂತ ಸಂಭವಿಸಿದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಸ್ಥಾವರಕ್ಕೆ ಕೂಡಲೇ ಧಾವಿಸಿದ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಿಸ್ತೃತವಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಇದೇ ವೇಳೆ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ 25 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಅಲ್ಲದೆ, ಮೃತ ಕಾರ್ಮಿಕರ ಪ್ರತಿ ಕುಟುಂಬದ ಅರ್ಹ ಸದಸ್ಯರಿಗೆ ಕಾರ್ಖಾನೆಯಲ್ಲಿ ಉದ್ಯೋಗವನ್ನು ನೀಡಲಾಗುವುದು. ಗಾಯಗೊಂಡವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಕಾರ್ಖಾನೆ ಭರಿಸುತ್ತದೆ ಹಾಗೂ ಮೃತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವನ್ನು ನೀಡಲಾಗುವುದು. ಈ ದುರ್ಘಟನೆಯಿಂದಾಗಿ ನನಗೆ ತೀವ್ರ ಆಘಾತ ಉಂಟಾಗಿದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ. ಈಗಾಗಲೇ ದುರಂತದ ಕಾರಣವನ್ನು ಪತ್ತೆ ಹಚ್ಚಲು ತನಿಖೆಗೆ ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.
ಈಗಾಗಲೇ ಪ್ರಧಾನ ಮಂತ್ರಿ ಮೋದಿಯವರು ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಇನ್ನು, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಈ ಅವಘಡದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ, ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡುವಂತೆ ನಿರ್ದೇಶಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ಸಿಪಿ ಅಧ್ಯಕ್ಷ ವೈ.ಎಸ್ ಜಗನ್ ಮೋಹನ್ ರೆಡ್ಡಿಯವರು ಕೂಡ ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಮಗ್ರ ತನಿಖೆಗೆ ಒತ್ತಾಯಿಸಿದ್ದು, ಹೊಣೆಗಾರರಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ ಬ್ಯಾಟ್‌ನಿಂದ ಉತ್ತರಿಸಿದ ಸೂರ್ಯಕುಮಾರ್ ಯಾದವ್



















