ಬೆಂಗಳೂರು: ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ಜಾರಿಗೆ ತರಲು ಮುಂದಾಗಿದೆ. ದೀಪಾವಳಿ ವೇಳೆಗೆ ಸಿಹಿ ಸುದ್ದಿ ಕಾದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ, ಶೇ.5, ಶೇ.12, ಶೇ.18 ಹಾಗೂ ಶೇ.28ರ ಜಿಎಸ್ ಟಿ ಸ್ಲ್ಯಾಬ್ ಗಳ ಬದಲಾಗಿ, ಶೇ.5 ಹಾಗೂ ಶೇ.18ರ ಸ್ಲ್ಯಾಬ್ ಗಳನ್ನು ಮಾತ್ರ ಉಳಿಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಇದರಿಂದಾಗಿ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ.
ಹೌದು, ಕಾರು ಖರೀದಿದಾರರಿಗೆ ಜಿಎಸ್ ಟಿ ಸ್ಲ್ಯಾಬ್ ಗಳ ಕಡಿತವು ವರದಾನವಾಗಲಿದೆ. ಕಾರುಗಳಿಗೆ ಈಗ ಶೇ.28ರಷ್ಟು ಜಿಎಸ್ ಟಿ ವಿಧಿಸಲಾಗುತ್ತದೆ. ಆದರೆ, ಸುಧಾರಣೆ ಬಳಿಕ ಶೇ.18ರಷ್ಟು ಜಿಎಸ್ ಟಿ ಅನ್ವಯವಾಗಲಿದೆ. ಇದರಿಂದಾಗಿ ಕಾರು ಖರೀದಿ ಮಾಡುವವರಿಗೆ 60 ಸಾವಿರ ರೂಪಾಯಿಯಿಂದ 1.3 ಲಕ್ಷ ರೂಪಾಯಿವರೆಗೆ ಉಳಿತಾಯವಾಗಲಿದೆ ಎಂದೇ ಹೇಳಲಾಗುತ್ತಿದೆ.
ಕಾರುಗಳ ಬೆಲೆ ಲೆಕ್ಕಾಚಾರ ಹೀಗಿರಲಿದೆ
ಕಾರು ಈಗಿನ ಬೆಲೆ ಜಿಎಸ್ ಟಿ ಸುಧಾರಣೆ ನಂತರದ ಬೆಲೆ
ವ್ಯಾಗನ್-ಆರ್ 7,48,228 ರೂ. 7,48,228 ರೂ.
ಬಲೇನೊ 8,90,566 ರೂ. 8,14,626 ರೂ.
ಡಿಸೈರ್ 9,45,500 ರೂ. 8,64,876 ರೂ.
ಎಕ್ಸ್ ಯು ವಿ 700 21,81,345 ರೂ. 20,63,434 ರೂ.
ಜಿಎಸ್ ಟಿ ಸುಧಾರಣೆ ನಂತರ ಕಾರುಗಳ ಬೆಲೆ ಮಾತ್ರವಲ್ಲ, ಟಿವಿ, ಮೊಬೈಲ್, ಎಸಿ, ಫ್ರಿಡ್ಜ್ ಸೇರಿ ಹಲವು ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಲಿದೆ. ಇನ್ನು, ಜಿಎಸ್ ಟಿ ಸುಧಾರಣೆ ಕುರಿತು ಸೆಪ್ಟೆಂಬರ್ 3 ಹಾಗೂ 4ರಂದು ನಡೆಯುವ ಜಿಎಸ್ ಟಿ ಕೌನ್ಸಿಲ್ ಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.



















