ಬೆಂಗಳೂರು : ಕಳೆದ ಮೂರು ದಿನಗಳಿಂದ ಸತತವಾಗಿ ಇಳಿಕೆ ಕಂಡಿದ್ದ ಚಿನ್ನದ ಬೆಲೆಯು (Gold Rate Today) ಶುಕ್ರವಾರ (ಮೇ 29) ಭಾರಿ ಏರಿಕೆ ಕಂಡಿದ್ದು, ಸಾರ್ವಜನಿಕರಿಗೆ ಶಾಕಿಂಗ್ ಸುದ್ದಿ ದೊರೆತಂತಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 158 ರೂಪಾಯಿ ಏರಿಕೆಯಾಗಿದೆ. ಇದೇ ರೀತಿ, 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 145 ರೂಪಾಯಿ ಏರಿಕೆಯಾಗಿದೆ.
ಇದರೊಂದಿಗೆ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರವು 1,57,640 ರೂಪಾಯಿಗೆ ಏರಿಕೆಯಾದಂತಾಗಿದೆ. ಹಾಗೆಯೇ, 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಧಾರಣೆಯು 1,44,500 ರೂಪಾಯಿ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಜಾಸ್ತಿಯಾಗಿರುವ ಕಾರಣ ದೇಶದಲ್ಲೂ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಮೇ 26ರಿಂದ ಮೇ 28ರವರೆಗೆ ಸತತವಾಗಿ ಬಂಗಾರದ ಧಾರಣೆಯಲ್ಲಿ ಇಳಿಕೆಯಾಗಿತ್ತು. ಇದರಿಂದಾಗಿ ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸುವವರಲ್ಲಿ ಸ್ವಲ್ಪ ನಿರಾಳತೆ ಮೂಡಿತ್ತು. ಆದರೆ, ಈಗ ದಿಢೀರನೆ ಏರಿಕೆಯಾಗಿರುವುದು ಗ್ರಾಹಕರ ಜೇಬಿಗೆ ಹೊರೆಯಾಗುವುದರಲ್ಲಿ ಎರಡು ಮಾತಿಲ್ಲ. ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.6ರಿಂದ ಶೇ.15ಕ್ಕೆ ಏರಿಕೆ ಮಾಡಿರುವುದು ಕೂಡ ಬೆಲೆ ಜಾಸ್ತಿಯಾಗಲು ಕಾರಣ ಎನ್ನಲಾಗಿದೆ.
ಬೆಳ್ಳಿ ದರದಲ್ಲೂ ಏರಿಕೆ
ಬೆಳ್ಳಿ ಬೆಲೆಯಲ್ಲಿ ಕೂಡ ಶುಕ್ರವಾರ ಏರಿಕೆಯಾಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯಲ್ಲಿ ಇಂದು 5 ಸಾವಿರ ರೂಪಾಯಿ ಏರಿಕೆಯಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಇಂದು ಒಂದು ಕೆ.ಜಿ ಬೆಳ್ಳಿಯ ಬೆಲೆಯು 2.8 ಲಕ್ಷ ರೂಪಾಯಿ ಆಗಿದೆ. ಗುರುವಾರ ಬೆಳ್ಳಿಯ ದರದಲ್ಲಿ ಕೆ.ಜಿಗೆ 10 ಸಾವಿರ ರೂಪಾಯಿ ಇಳಿಕೆಯಾಗಿತ್ತು.
ಇದನ್ನೂ ಓದಿ : 3 ದಿನ ರಾಜ್ಯಾದ್ಯಂತ ಭಾರೀ ಮಳೆ ಎಚ್ಚರಿಕೆ!



















