ಮೈಸೂರು : ಮೈಸೂರು ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ 10 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿಯ ದೇಹದ ಮೇಲೆ ಬಟ್ಟೆ ಇಲ್ಲದೆ ಮೃತದದೇಹ ಪತ್ತೆಯಾದ ಕಾರಣ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ದಸರಾ ಸಮಯದಲ್ಲಿ ಗೊಂಬೆ ಬಲೂನ್ ವ್ಯಾಪಾರಕ್ಕಾಗಿ ಕಲಬುರಗಿ ಕಡೆಯಿಂದ ಮೈಸೂರಿಗೆ ಹಕ್ಕಿಪಿಕ್ಕಿ ಜನಾಂಗದ 50ಕ್ಕೂ ಹೆಚ್ಚು ಕುಟುಂಬ ಬಂದಿವೆ. ಇವರು ದೊಡ್ಡಕೆರೆ ಮೈದಾನದ ಸುತ್ತಲಿನ ರಸ್ತೆಯಲ್ಲಿ ನೆಲೆಸಿದ್ದರು. ಬುಧವಾರ ಚಾಮುಂಡೇಶ್ವರಿ ದೇವಾಲಯದ ತೆಪ್ಪೋತ್ಸವ ಮುಗಿಸಿ, ಗುರುವಾರ ಬೇರೆ ಕಡೆ ತೆರಳಲು ಸಿದ್ಧತೆ ನಡೆಸಿದ್ದರು.
ಅದರಂತೆ ರಾತ್ರಿ ವ್ಯಾಪಾರ ಮುಗಿಸಿ ಬಂದ ಬಾಲಕಿ ತಂದೆ, ತಾಯಿಯೊಂದಿಗೆ ಮಲಗಿದ್ದಳು. ಬೆಳಗ್ಗೆ ಎಲ್ಲರೂ ಎದ್ದಾಗ ಬಾಲಕಿ ಸ್ಥಳದಿಂದ ನಾಪತ್ತೆಯಾಗಿದ್ದಳು. ಹುಡುಕಾಡಿದಾಗ ಟೆಂಟ್‌ನಿಂದ 50 ಮೀ ದೂರದಲ್ಲಿರುವ ಮಣ್ಣಿನ ರಾಶಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸದ್ಯ ವ್ಯಾಪಾರಕ್ಕೆ ಆಗಮಿಸಿದ್ಧ 50 ಹಕ್ಕಿಪಿಕ್ಕಿ ಕುಟುಂಬಸ್ಥರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಆಗಮಿಸಿದ್ದು, ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ.



















