ಬೆಂಗಳೂರು : ಇತ್ತೀಚೆಗಷ್ಟೇ 2026ರ ಐಸಿಸಿ ಟಿ20 ವಿಶ್ವಕಪ್ ಗೆದ್ದು ಬೀಗಿರುವ ಟೀಮ್ ಇಂಡಿಯಾ ಹಾಗೂ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಕಾರ್ಯವೈಖರಿಯನ್ನು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮಾರ್ಕ್ ಬುಚರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದೇ ಹೊತ್ತಿಗೆ, ಕೇವಲ ವೈಯಕ್ತಿಕ ಮೈಲಿಗಲ್ಲುಗಳು ಮತ್ತು ವೈಯಕ್ತಿಕ ದಾಖಲೆಗಳ ಬೆನ್ನೇರುತ್ತಿರುವ ಪಾಕಿಸ್ತಾನ ತಂಡ ಹಾಗೂ ಬಾಬರ್ ಆಜಮ್ ಅವರ ಮನಸ್ಥಿತಿಯನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ಭಾರತ ತಂಡವು ಕೇವಲ ಒಬ್ಬಿಬ್ಬರು ಸೂಪರ್‌ಸ್ಟಾರ್‌ಗಳನ್ನು ಅವಲಂಬಿಸುವ ಸಂಸ್ಕೃತಿಯಿಂದ ಹೊರಬಂದು, ಸಂಘಟಿತ ಪ್ರದರ್ಶನದ ಮೂಲಕ ಹೇಗೆ ಯಶಸ್ಸು ಸಾಧಿಸುತ್ತಿದೆ ಎಂಬುದನ್ನು ಬುಚರ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ವೈಯಕ್ತಿಕ ಮೈಲಿಗಲ್ಲುಗಳಿಂದ ಹೊರಬಂದ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು, ಈ ಭಾರಿ ಗೆಲುವು ಕೇವಲ ಒಬ್ಬ ಆಟಗಾರನ ವೈಯಕ್ತಿಕ ಸಾಧನೆಯಾಗಿರದೆ ಇಡೀ ತಂಡದ ಸಂಘಟಿತ ಹೋರಾಟದ ಫಲವಾಗಿದೆ. ಗೌತಮ್ ಗಂಭೀರ್ ಅವರು ಭಾರತ ತಂಡದ ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ, ತಂಡದಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ಅತ್ಯಂತ ಬಲಿಷ್ಠ ಪಡೆಯನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಾರ್ಕ್ ಬುಚರ್, ಗಂಭೀರ್ ಅವರು ಸೂಪರ್‌ಸ್ಟಾರ್ ಸಂಸ್ಕೃತಿಯನ್ನು ಬದಿಗೊತ್ತಿ, ತಂಡದ ಗೆಲುವಿಗಾಗಿ ಆಡುವ ಮನಸ್ಥಿತಿಯನ್ನು ಆಟಗಾರರಲ್ಲಿ ಬಿತ್ತಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಯಾವುದೇ ತಂಡ ಗೆಲ್ಲಬೇಕಾದರೆ ಅಲ್ಲಿ ವೈಯಕ್ತಿಕ ಮೈಲಿಗಲ್ಲುಗಳಿಗಿಂತ ತಂಡದ ಒಟ್ಟಾರೆ ಪ್ರದರ್ಶನವೇ ನಿರ್ಣಾಯಕವಾಗುತ್ತದೆ ಎಂಬುದನ್ನು ಗಂಭೀರ್ ತಮ್ಮ ತರಬೇತಿಯ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಅಜಗಜಾಂತರ ವ್ಯತ್ಯಾಸ
ಕಳೆದ ಮೂರು ವರ್ಷಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಪ್ರದರ್ಶನದ ನಡುವೆ ಇರುವ ಅಜಗಜಾಂತರ ವ್ಯತ್ಯಾಸವನ್ನು ಮಾರ್ಕ್ ಬುಚರ್ ಬೊಟ್ಟು ಮಾಡಿದ್ದಾರೆ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಭಾರತ ತಂಡವು ಅಕ್ಷರಶಃ ಅಜೇಯವಾಗಿ ಹೊರಹೊಮ್ಮಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 2024ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ ಹಾಗೂ ಇದೀಗ 2026ರ ಟಿ20 ವಿಶ್ವಕಪ್ ಹೀಗೆ ಸತತ ಮೂರು ಐಸಿಸಿ ಟೂರ್ನಿಗಳನ್ನು ಗೆದ್ದು ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ. ಆದರೆ ಮತ್ತೊಂದೆಡೆ, ಪಾಕಿಸ್ತಾನ ತಂಡವು 2022ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ನಂತರ ಸತತ ನಾಲ್ಕು ಐಸಿಸಿ ಟೂರ್ನಿಗಳಲ್ಲಿ ಕನಿಷ್ಠ ಸೆಮಿಫೈನಲ್ ತಲುಪುವಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿದೆ. ನೆರೆಯ ಪಾಕಿಸ್ತಾನವು ಇಂದಿಗೂ ವೈಯಕ್ತಿಕ ಸೂಪರ್‌ಸ್ಟಾರ್‌ಗಳು ಮತ್ತು ದಾಖಲೆಗಳ ಗುಂಗಿನಲ್ಲೇ ಮುಳುಗಿದೆ. ಆದರೆ ಗಂಭೀರ್ ಈ ಸಂಪ್ರದಾಯವನ್ನು ಮುರಿದು ಬಲಿಷ್ಠ ತಂಡವನ್ನು ಕಟ್ಟುವ ಮೂಲಕ ಮಾದರಿಯಾಗಿದ್ದಾರೆ ಎಂದು ಬುಚರ್ ಪಾಕ್ ತಂಡದ ಕಾಲೆಳೆದಿದ್ದಾರೆ.
ಬೌಲರ್‌ಗಳ ಪ್ರಾಮುಖ್ಯತೆ ಹಾಗೂ ಬುಮ್ರಾ ಮ್ಯಾಜಿಕ್
ಟಿ20 ಕ್ರಿಕೆಟ್‌ನಲ್ಲಿ ಕೇವಲ ಬ್ಯಾಟರ್‌ಗಳಷ್ಟೇ ಅಲ್ಲದೆ ಬೌಲರ್‌ಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿರುವ ಬುಚರ್, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಬೌಲರ್‌ಗಳು, ವಿಶೇಷವಾಗಿ ಜಸ್‌ಪ್ರೀತ್ ಬುಮ್ರಾ ತೋರಿದ ಜಾಣ್ಮೆಯನ್ನು ಗುಣಗಾನ ಮಾಡಿದ್ದಾರೆ. ಆ ಹೈ-ವೋಲ್ಟೇಜ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲಲು ಕೊನೆಯ ಮೂರು ಓವರ್‌ಗಳಲ್ಲಿ 45 ರನ್‌ಗಳ ಅಗತ್ಯವಿದ್ದಾಗ, 18ನೇ ಓವರ್ ಬೌಲ್ ಮಾಡಿದ ಬುಮ್ರಾ ಕೇವಲ 6 ರನ್ ನೀಡಿ ಇಂಗ್ಲೆಂಡ್‌ನ ಭಾರಿ ರನ್ ಚೇಸ್ ಅನ್ನು ಯಶಸ್ವಿಯಾಗಿ ತಡೆದರು. ಕೇವಲ 33 ರನ್ ನೀಡಿ ಅದ್ಭುತ ಸ್ಪೆಲ್ ಹಾಕಿದ ಬುಮ್ರಾ ಭಾರತಕ್ಕೆ ಆ ಪಂದ್ಯವನ್ನು ಗೆದ್ದುಕೊಟ್ಟರು. ಟಿ20 ಮಾದರಿಯಲ್ಲಿ ಬೌಲರ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಆಟದ ಪ್ರತಿಯೊಂದು ಮಾದರಿಯಂತೆಯೇ ಟಿ20ಯಲ್ಲೂ ಬೌಲರ್‌ಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿರುತ್ತದೆ. ಆ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಬೌಲರ್‌ಗಳೇ ಗೆಲುವು ತಂದುಕೊಟ್ಟರು ಎಂದು ಬುಚರ್ ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ!



















