ಮೈಸೂರು : ಗಿರವಿ ಇರಿಸಿಕೊಂಡ ಚಿನ್ನಾಭರಣ ವಾಪಸ್ ನೀಡದೆ ಗ್ರಾಹಕರಿಗೆ ಲಕ್ಷಾಂತರ ಹಣ ವಂಚಿಸಿರುವ ಆರೋಪದ ಪ್ರಕರಣದಲ್ಲಿ ‘SDJ ಗೋಲ್ಡ್ ಕಂಪನಿ’ ಮಾಲೀಕ ಸೌಂದರ್ ರಾಜ್ ಅಲಿಯಾಸ್ ಚಿನ್ನತಂಬಿ ಅವರನ್ನು ಗುರುವಾರ ಬೆಳಗ್ಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ನಿವಾಸಿ ಮಹಾಂತೇಶ್ ಎನ್ನುವವರು ಕುವೆಂಪುನಗರ ಠಾಣೆಗೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು. ‘ನಾನು ಮತ್ತು ಸ್ನೇಹಿತರಾದ ಸುಷ್ಮಾ, ಮಾಲಾ, ಬ್ರಹ್ಮಾ ರೆಡ್ಡಿ ಹಾಗೂ ರೇಖಾ ಸೇರಿ ಮೈಸೂರಿನ ಡಿಜಿಎಫ್ ಸಂಸ್ಥೆಯಲ್ಲಿ ₹64 ಲಕ್ಷಕ್ಕೆ 1 ಕೆ.ಜಿ ಚಿನ್ನಾಭರಣ ಮತ್ತು 100 ಗ್ರಾಂ. ಚಿನ್ನದ ಗಟ್ಟಿ ಅಡವಿಡಲು ಹೋದೆವು. ಈ ವೇಳೆ ನಮ್ಮನ್ನು ಬೆದರಿಸಿ 560 ಗ್ರಾಂ. ತೂಕದ ಚಿನ್ನಾಭರಣ ಮತ್ತು 100 ಗ್ರಾಂ. ತೂಕದ ಚಿನ್ನದ ಬಿಸ್ಕೆಟ್‌ಗಳನ್ನು ಕರಗಿಸಿದರು. ಈಗ ಉಳಿದ ಚಿನ್ನ ವಾಪಸ್ ನೀಡದೆ ವಂಚಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಟ್ಟಿಗೆಗೂಡಿನಲ್ಲಿರುವ ಮನೆಯಲ್ಲಿ ಸೌಂದರ್‌ರಾಜ್ ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಸ್ಥೆಯಿಂದ ವಂಚನೆಗೆ ಒಳಗಾಗಿದ್ದಾರೆ ಎನ್ನಲಾದ ಗ್ರಾಹಕರು ಬುಧವಾರ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದರು. ನಜರ್‌ಬಾದ್ ಠಾಣೆಗೂ ಈ ಬಗ್ಗೆ ದೂರು ನೀಡಿದ್ದರು. ‘ಎಫ್‌ಐಆರ್ ದಾಖಲಾದರೆ ಸಾಲದು. ನೂರಾರು ಜನರಿಗೆ ವಂಚನೆ ಮಾಡಿದವರನ್ನು ಬಂಧಿಸಬೇಕು‘ ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ : ಜೈಲಿನಲ್ಲಿದ್ದುಕೊಂಡೇ ಪತ್ನಿಗೆ ವೀಡಿಯೋ ಕಾಲ್ ಮಾಡಿದ ಕೈದಿ!



















