ತುಮಕೂರು : ಹೊಸ ಬೈಕ್ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಮೊದಲ ಪ್ರಯಾಣದಲ್ಲೇ ಸಂಭವಿಸಿದ ಭೀಕರ ಅಪಘಾತದಲ್ಲಿ 18 ವರ್ಷದ ಯುವಕ ಮೃತಪಟ್ಟಿರುವ ದುರ್ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ನಡೆದಿದೆ.
ಮೃತ ಯುವಕನನ್ನು ಪಾವಗಡ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ನಿವಾಸಿ ನಂದೀಶ್ ಕುಮಾರ್ (18) ಎಂದು ಗುರುತಿಸಲಾಗಿದೆ. ನಂದೀಶ್ ನಿನ್ನೆ ಶೋರೂಂನಲ್ಲಿ ಹೊಸ ಬೈಕ್ ಖರೀದಿಸಿದ್ದು, ಬಳಿಕ ತನ್ನ ಸ್ನೇಹಿತ ಚಿರು ಜೊತೆ ಅದೇ ಬೈಕ್‌ನಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದನು.
ಆದ್ರೆ ಹೊಸ ಬೈಕ್‌ನ ಮೊದಲ ಪ್ರಯಾಣವೇ ಆತನ ಜೀವನದ ಕೊನೆಯ ಪ್ರಯಾಣವಾಗಲಿದೆ ಎಂದು ಯಾರೂ ಊಹಿಸಿರಲಿಲ್ಲ. ಗಂಗಸಾಗರ ಕ್ರಾಸ್ ಬಳಿ ತಲುಪಿದಾಗ ವೈಎನ್ ಹೊಸಕೋಟೆ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಂದೀಶ್ ಕುಮಾರ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಸ್ನೇಹಿತ ಚಿರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾನೆ. ಘಟನೆ ಕುರಿತು ಪಾವಗಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ಟಿಪ್ಪರ್ ಲಾರಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ದುರ್ಘಟನೆ ಹೊಸ ಬೈಕ್ ಖರೀದಿಯ ಸಂಭ್ರಮದಲ್ಲಿದ್ದ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.
ಇದನ್ನೂ ಓದಿ : ಧನುರ್ವಾಯು ಲಸಿಕೆ ಪಡೆದ ಕೆಲವೇ ನಿಮಿಷದಲ್ಲಿ ಕುಸಿದು ಬಿದ್ದು 17ರ ಯುವತಿ ಸಾವು : ವಿಡಿಯೋ ಇಲ್ಲಿದೆ!


















