ಬೆಂಗಳೂರು : ಇಂದು ನಭೋ ಮಂಡಲ ಚಂದ್ರಗ್ರಹಣದ ಕೌತಕಕ್ಕೆ ಸಾಕ್ಷ್ಯಿಯಾಗಲಿದೆ. ಈ ವರ್ಷದ ಮೊದಲ ಚಂದ್ರಗ್ರಹಣ ಇಂದು ಮಧ್ಯಾಹ್ನ ಆರಂಭವಾಗಿ ಸಂಜೆ ವೇಳೆಗೆ ಅಂತ್ಯವಾಗಲಿದೆ. ನಮ್ಮ ರಾಜ್ಯದಲ್ಲಿ ಚಂದ್ರಗ್ರಹಣದ ಗೋಚರವಾಗದೇ ಇದ್ದರೂ ಗ್ರಹಣದ ಪ್ರಭಾವ ಇರಲಿದೆ. ಹಾಗಾಗಿ ಇಂದು ಬೆಂಗಳೂರಿನ ವಿವಿಧ ದೇವಾಲಯದಲ್ಲಿ ಗ್ರಹಣದ ಪ್ರಯುಕ್ತ ವಿಶೇಷ ಪೂಜೆಗಳು ನಡೆಲಿದೆ.
ಇಂದು ಮಧ್ಯಾಹ್ನ 3:27ಕ್ಕೆ ರಕ್ತಚಂದ್ರಗ್ರಹಣ ಆರಂಭವಾಗಿ ಸಂಜೆ 6:46ಕ್ಕೆ ಮೋಕ್ಷಗೊಳ್ಳಲಿದೆ. ಈ ಸಮಯದಲ್ಲಿ ಬೆಂಗಳೂರಿನ ಎಲ್ಲಾ ದೇವಾಲಯ ಬಂದ್ ಆಗಲಿದೆ. ಗ್ರಹಣದ ಕಾರಣದಿಂದ ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಕಾಡು ಮಲ್ಲೇಶ್ವರ ದೇವಾಲಯ:
ಇಂದು ನಗರದ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಶಿವನಿಗೆ ಬೆಳಗ್ಗೆಯೇ ವಿಶೇಷ ಪೂಜೆ ನೆರವೇರಿದ್ದು, ಭಕ್ತರಿಗೆ ಮಧ್ಯಾಹ್ನ 12ರವರಗೆ ದರ್ಶನದ ವ್ಯವಸ್ಥೆ ಇರಲಿದೆ. ಬಳಿಕ ಸಂಜೆ ಗ್ರಹಣ ಶುದ್ಧಿ ಮಾಡಿ, ಕ್ಷೀರಾಭಿಷೇಕ, ಪಂಚಾಮೃತ ನೈವೇದ್ಯ ನೀಡಲಿದ್ದಾರೆ.
ಅಣ್ಣಮ್ಮ ದೇವಾಲಯ:
ಮಂಗಳವಾರವಾಗಿರುವುದರಿಂದ ಬೆಳಗ್ಗೆ 6 ಗಂಟೆಗೆ ತಾಯಿ ಅಣ್ಣಮ್ಮನಿಗೆ ವಿಶೇಷ ಹಾಲಿನ ಅಭಿಷೇಕ ಮಾಡಿ ಹೂವಿನ ಅಲಂಕಾರ ಮಾಡಲಾಗಿದೆ. ಗ್ರಹಣದ ಮೋಕ್ಷದ ಬಳಿಕ ತಾಯಿಗೆ ಗಂಗೆಯ ಅಭಿಷೇಕ ಮಾಡಿ ಶುಚಿ ಮಾಡಿ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. ಜೊತೆಗೆ ನಾಳೆ ಬೆಳಗ್ಗೆ ಗ್ರಹಣ ಶಾಂತಿ ಹೋಮ ಕೂಡ ನಡೆಯಲಿದೆ.
ಗವಿಗಂಗಾಧರೇಶ್ವರ ದೇವಾಲಯ:
ಇಂದು ಎಂದಿನಂತೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿದೆ. 9 ಗಂಟೆವರೆಗೆ ಗಂಗಾಧರನಿಗೆ ವಿಶೇಷ ಪೂಜೆ ನೆರೆವೇರಲಿದ್ದು, ಸಂಜೆ ಮತ್ತೆ ಗಂಗಾಧರೇಶ್ವರನಿಗೆ ಜಲಾಭಿಷೇಕ ಮಾಡಿ, ನಾಳೆ ಮಹಾಭಿಷೇಕ ಮಾಡಿ ಗ್ರಹಣ ಶಾಂತಿ ಮಾಡಲಾಗುತ್ತದೆ.
ಬನಶಂಕರಿ ದೇವಾಲಯ:
ಬನಶಂಕರಿ ದೇವಾಲಯದಲ್ಲಿ ಬೆಳಗ್ಗೆ 5ರಿಂದಲೇ ವಿಶೇಷ ಹುಣ್ಣಿಮೆ ಅಭಿಷೇಕ ಮತ್ತು ಪೂಜೆ ನಡೆಯಲಿದೆ. 8:30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಗ್ರಹಣದ ಬಳಿಕ ಬನಶಂಕರಿಗೆ ವಿಶೇಷ ಅಭಿಷೇಕ ಮಾಡಿ ವಿಶೇಷ ಅಲಂಕಾರದಿಂದ ಭಕ್ತರ ದರ್ಶನ ನೀಡಲಿದ್ದಾಳೆ ತಾಯಿ ಬನಶಂಕರಿ.
ವಿಜಯನಗರ ಶನಿದೇವರ ದೇವಾಲಯ:
ಬೆಳಗ್ಗೆ 5ರಿಂದಲೇ ಶನಿ ದೇವರಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಬಳಿಕ ಅಭಿಷೇಕ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಿದ್ದಾರೆ. ಸಂಜೆ ಗ್ರಹಣ ಶಾಂತಿ ಮಾಡಿ ನಾಳೆ ಬೆಳಗ್ಗೆ ಸತ್ಯನಾರಾಯಣ ಪೂಜೆ ಕೂಡ ಮಾಡಲಿದ್ದಾರೆ.
ಇದನ್ನೂ ಓದಿ : ಕೋಳಿ-ಮಾಂಸ ಮಾರಾಟ ಮಳಿಗೆಗಳ ಮೇಲೆ GBA ವಿಶೇಷ ತಪಾಸಣೆ | ನಿಯಮ ಉಲ್ಲಂಘಿಸಿದ ಅಂಗಡಿಗಳಿಗೆ ಬಿತ್ತು ಫೈನ್



















