ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಅಪ್ಪ-ಮಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶಂಶಾದ್ ಬೇಗಂ ಎಂ.ಎ. ಹಾಗೂ ಮನ್ಸೂರ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ತಮಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಪ್ರಭಾವಿ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕವಿದೆ ಎಂದು ಸಾರ್ವಜನಿಕರನ್ನು ನಂಬಿಸುತ್ತಿದ್ದರು. ಬಳಿಕ ಭಾರತೀಯ ರೈಲ್ವೆ, ಆದಾಯ ತೆರಿಗೆ ಇಲಾಖೆ, ನೀರಾವರಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡುತ್ತಿದ್ದರು.
ವಿದ್ಯಾವಂತ ನಿರುದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಸಂಪರ್ಕ ಸಾಧಿಸುತ್ತಿದ್ದ ಆರೋಪಿಗಳು, ಉದ್ಯೋಗದ ಭರವಸೆ ನೀಡಿ ಹಣ ಸಂಗ್ರಹಿಸುತ್ತಿದ್ದರು. ಉತ್ತರ ಕರ್ನಾಟಕದ ಸುಮಾರು 40 ಮಂದಿಯಿಂದ ಒಟ್ಟು ₹5 ಕೋಟಿ 30 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಉದ್ಯೋಗದ ಭರವಸೆ ನೀಡಿದ ಬಳಿಕ ನಕಲಿ ನೇಮಕಾತಿ ಪತ್ರಗಳನ್ನು ನೀಡಿ ಅಭ್ಯರ್ಥಿಗಳನ್ನು ನಂಬಿಸುತ್ತಿದ್ದರು. ಅಷ್ಟೇ ಅಲ್ಲದೆ ಬೆಂಗಳೂರು, ಕೋಲ್ಕತ್ತಾ ಹಾಗೂ ಮುಂಬೈ ನಗರಗಳಲ್ಲಿ ತರಬೇತಿ ಕೇಂದ್ರಗಳನ್ನು ತೆರೆದು, ಅಲ್ಲಿ ಅಭ್ಯರ್ಥಿಗಳಿಗೆ ತರಬೇತಿಯನ್ನೂ ನೀಡುತ್ತಿದ್ದರು. ನಂಬಿಕೆ ಮೂಡಿಸಲು ನಾಲ್ಕು ತಿಂಗಳ ಕಾಲ ಸಂಬಳವನ್ನೂ ನೀಡಿದ್ದರೆಂದು ಆರೋಪಿಸಲಾಗಿದೆ.
ಬಳಿಕ ಉದ್ಯೋಗವೂ ಇಲ್ಲ, ಸಂಬಳವೂ ನಕಲಿ ವ್ಯವಸ್ಥೆಯ ಭಾಗ ಎಂಬುದು ತಿಳಿಯುತ್ತಿದ್ದಂತೆ ವಂಚನೆಗೆ ಒಳಗಾದವರು ಸಿಸಿಬಿಗೆ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಂಶಾದ್ ಬೇಗಂ ಹಾಗೂ ಮನ್ಸೂರ್ ಅವರನ್ನು ಬಂಧಿಸಿದ್ದು, ವಂಚನೆ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಅಂಚೆ ಕಚೇರಿಯಲ್ಲೇ ಕಳ್ಳತನ ಯತ್ನ ; 6 ಲಕ್ಷ ಹಣ ಇದ್ದ ಲಾಕರ್ ಒಡೆಯಲಾಗದೆ ಖದೀಮರು ಪರಾರಿ!



















