ಗುವಾಹಟಿ : ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರದ ಕಂದಾಯ ಸಚಿವ ಹಾಗೂ ಆಡಳಿತಾರೂಢ ಬಿಜೆಪಿ ಮೈತ್ರಿಕೂಟದ ಹಿರಿಯ ನಾಯಕ ಕೇಶವ್ ಮಹಂತ ಅವರ ಪುತ್ರಿ ದಿಬೀಶಾ ಮಹಂತ, ಕೇಂದ್ರ ಸರ್ಕಾರದ ವಿರುದ್ಧ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.
ನೀಟ್-ಯುಜಿ (NEET-UG) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ಖಂಡಿಸಿ ಗುವಾಹಟಿಯ ಚಾಚಲ್ ಪ್ರದೇಶದಲ್ಲಿ ನಡೆದ ಧರಣಿಯಲ್ಲಿ ಭಾಗವಹಿಸಿದ ದಿಬೀಶಾ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿವೆ.
ತಂದೆ ಸಚಿವ, ಮಗಳು ಹೋರಾಟಗಾರ್ತಿ:
ಕೇಶವ್ ಮಹಂತ ಅವರು ಅಸ್ಸಾಂ ಗಣ ಪರಿಷತ್ (AGP) ಪಕ್ಷದ ಪ್ರಮುಖ ನಾಯಕರಾಗಿದ್ದು, 2016ರಿಂದಲೂ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಜೆಪಿ ಮೈತ್ರಿಕೂಟದ ಸರ್ಕಾರದ ಹಿರಿಯ ಸಚಿವರ ಮಗಳೇ, ಕೇಂದ್ರ ಶಿಕ್ಷಣ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಪ್ರತಿಭಟನೆಯ ಮುಂಚೂಣಿಯಲ್ಲಿ ನಿಂತು ‘ಇಂಕ್ವಿಲಾಬ್’ ಘೋಷಣೆಗಳನ್ನು ಕೂಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಪ್ರತಿಕ್ರಿಯೆ
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ವಿದ್ಯಾರ್ಥಿಗಳ ಪ್ರತಿಭಟನಾ ಹಕ್ಕನ್ನು ಸರ್ಕಾರ ಗೌರವಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. “ಇದು ಸಂಪೂರ್ಣವಾಗಿ ವಿದ್ಯಾರ್ಥಿಗಳ ಚಳವಳಿಯಾಗಿದ್ದು, ಅವರ ಬೇಡಿಕೆ ಮತ್ತು ವಾದಗಳನ್ನು ನಾವು ಗೌರವಿಸುತ್ತೇವೆ. ಪ್ರಧಾನಿಯವರು ಈ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ. ಆದರೆ ಪ್ರಸ್ತುತ ಅಸ್ಸಾಂ ಭೀಕರ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದರಿಂದ, ಪ್ರತಿಯೊಬ್ಬರೂ ಈ ನೈಸರ್ಗಿಕ ವಿಕೋಪ ಪರಿಹಾರ ಕಾರ್ಯಗಳತ್ತ ಗಮನ ಹರಿಸಬೇಕೆಂದು ಕೋರುತ್ತೇನೆ” ಎಂದು ತಿಳಿಸಿದ್ದಾರೆ. ಜೊತೆಗೆ, ಯುವತಿ ಹೋರಾಟದಲ್ಲಿ ಭಾಗಿಯಾಗಿದ್ದಾಳೆ ಎಂಬ ಕಾರಣಕ್ಕೆ ಆಕೆಯ ತಂದೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡದಂತೆ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ‘ನೂತನ ಶಿಕ್ಷಣ ಸಚಿವರಾಗಿ ಪ್ರಹ್ಲಾದ್ ಜೋಶಿ ಅಧಿಕಾರ ಸ್ವೀಕಾರ’ : ಕರ್ತವ್ಯ ಪ್ರಜ್ಞೆಯಿಂದ ಜವಾಬ್ದಾರಿ ನಿಭಾಯಿಸುವೆ ಎಂದ ಕನ್ನಡಿಗ


















