ಭೋಪಾಲ್ (ಮಧ್ಯಪ್ರದೇಶ): ಸಾಯಂಕಾಲ ವಾಕಿಂಗ್ ಮಾಡುತ್ತಾ, ಮೊಮ್ಮಗನೊಂದಿಗೆ ಕಾಲ ಕಳೆಯುತ್ತಾ ಅಡ್ಡಾಡುತ್ತಿದ್ದ ಮಧ್ಯಪ್ರದೇಶದ ಮಾಜಿ ಸಚಿವರಿಗೆ ಬಂದ ಒಂದು ಅನಿರೀಕ್ಷಿತ ಫೋನ್ ಅವರ ಕುಟುಂಬದಲ್ಲಿ ಸಂಭ್ರಮದ ಅಲೆ ಎಬ್ಬಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ದೇಶದ ಆರು ಹೊಸ ರಾಜ್ಯಪಾಲರನ್ನು ನೇಮಕ ಮಾಡಿದ್ದು, ಅದರಲ್ಲಿ ಮಧ್ಯಪ್ರದೇಶದ ಹಿರಿಯ ರಾಜಕಾರಣಿ ಢಾಲ್ ಸಿಂಗ್ ಬಿಸೆನ್ ಅವರೂ ಒಬ್ಬರು. ಉತ್ತರಾಖಂಡದ ರಾಜ್ಯಪಾಲರಾಗುವ ಹೊಸ ಹೊಣೆ ಅವರ ಹೆಗಲೇರಿದೆ.
ಮೊಮ್ಮಗನೊಂದಿಗೆ ವಾಕಿಂಗ್‌ನಲ್ಲಿದ್ದಾಗ ಬಂದ ಕರೆ
ಮಧ್ಯಪ್ರದೇಶದ ಸೇವಣಿ ಪಟ್ಟಣದಲ್ಲಿರುವ ತಮ್ಮ ನಿವಾಸದ ಬಳಿ ಸೋಮವಾರ ಸಾಯಂಕಾಲ ಢಾಲ್ ಸಿಂಗ್ ಬಿಸೆನ್ (74) ಅವರು ತಮ್ಮ ಮೊಮ್ಮಗನೊಂದಿಗೆ ವಾಕಿಂಗ್ ಮಾಡುತ್ತಿದ್ದರು. ಅದೇ ಸಮಯದಲ್ಲಿ ಭೋಪಾಲ್‌ನಿಂದ ಬಂದ ದೂರವಾಣಿ ಕರೆಯೊಂದು ಅವರ ಜೀವನದ ಮಹತ್ವದ ತಿರುವಿಗೆ ಸಾಕ್ಷಿಯಾಯಿತು. ತಮಗೆ ಉತ್ತರಾಖಂಡ ರಾಜ್ಯಪಾಲರ ಹುದ್ದೆ ಸಿಕ್ಕಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿದು ತಕ್ಷಣವೇ ಸಂಬಂಧಿಕರು ಮತ್ತು ನೂರಾರು ಬೆಂಬಲಿಗರು ಅವರ ಮನೆಗೆ ಧಾವಿಸಿ ಅಭಿನಂದನೆಗಳ ಸುರಿಮಳೆಗೈದರು. ಢಾಲ್ ಸಿಂಗ್ ಬಿಸೆನ್ ಅವರು ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಅವರ ಉತ್ತರಾಖಂಡ ರಾಜ್ಯಪಾಲರ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಸಾಮಾನ್ಯ ಪಂಚಾಯತ್ ಸದಸ್ಯರಿಂದ ರಾಜ್ಯಪಾಲರ ಗದ್ದುಗೆಯವರೆಗೆ
1952ರ ಮೇ 14ರಂದು ಮಧ್ಯಪ್ರದೇಶದ ಸೇವಣಿ ಜಿಲ್ಲೆಯ ಪಿಪರಿಯಾ ಗ್ರಾಮದಲ್ಲಿ ಜನಿಸಿದ ಬಿಸೆನ್, ವೃತ್ತಿಯಲ್ಲಿ ಆಯುರ್ವೇದ ವೈದ್ಯರು ಹಾಗೂ ಕೃಷಿಕರು. ತಮ್ಮ ರಾಜಕೀಯ ಜೀವನವನ್ನು ಗ್ರಾಮದ ಚುನಾಯಿತ ಪಂಚ ಸದಸ್ಯರಾಗಿ ಆರಂಭಿಸಿದ ಅವರು, ಹಂತ ಹಂತವಾಗಿ ಸ್ಥಳೀಯ ರಾಜಕಾರಣದಲ್ಲಿ ಉತ್ತುಂಗಕ್ಕೇರಿದರು. 1990, 1993, 1998 ಮತ್ತು 2003ರಲ್ಲಿ ಬರ್ಘಾಟ್ ಕ್ಷೇತ್ರದಿಂದ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದರು. ನಂತರ ಕ್ಷೇತ್ರ ಮೀಸಲಾತಿಯಿಂದಾಗಿ ಕೇವಲಾಸಿ ಕ್ಷೇತ್ರದಿಂದ ಸ್ಪರ್ಧಿಸಿ ಹಿನ್ನಡೆ ಅನುಭವಿಸಿದರೂ ರಾಜಕೀಯವಾಗಿ ಸಕ್ರಿಯರಾಗಿದ್ದರು.
ಸಚಿವರಾಗಿ, ಸಂಸದರಾಗಿ ಸೇವೆ
2003ರಿಂದ 2005ರವರೆಗೆ ಮಧ್ಯಪ್ರದೇಶ ಸರ್ಕಾರದಲ್ಲಿ ಅರಣ್ಯ, ಸಾರಿಗೆ ಮತ್ತು ಖನಿಜ ಇಲಾಖೆಗಳ ಕ್ಯಾಬಿನೆಟ್ ಸಚಿವರಾಗಿ ಬಿಸೆನ್ ಸೇವೆ ಸಲ್ಲಿಸಿದ್ದಾರೆ. ಬಳಿಕ ಶಾಲಾ ಶಿಕ್ಷಣ ಮತ್ತು ಕಾರಾಗೃಹ ಇಲಾಖೆಯ ಜವಾಬ್ದಾರಿಯನ್ನೂ ನಿರ್ವಹಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಾಲಘಾಟ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದ ಅವರು, 17ನೇ ಲೋಕಸಭೆಯ ಸದಸ್ಯರಾಗಿದ್ದರು. ಸಂಸತ್ತಿನಲ್ಲಿ ಶೇ.99ರಷ್ಟು ಅತ್ಯುತ್ತಮ ಹಾಜರಾತಿ ಕಾಯ್ದುಕೊಂಡಿದ್ದ ಅವರು, ಕೃಷಿ, ಗ್ರಾಮೀಣಾಭಿವೃದ್ಧಿ ಹಾಗೂ ಬುಡಕಟ್ಟು ಕಲ್ಯಾಣದ ಕುರಿತು ಹಲವು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಪ್ರಸ್ತುತ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿರುವ ಇವರಿಗೆ ಈಗ ದೇಶದ ಪ್ರಮುಖ ರಾಜ್ಯವೊಂದರ ಸಾಂವಿಧಾನಿಕ ಉನ್ನತ ಹುದ್ದೆ ಒಲಿದು ಬಂದಿದೆ.
ಇದನ್ನೂ ಓದಿ:ಫಿಟ್‌ನೆಸ್ ಪ್ರಶ್ನಿಸಿದ ಟೀಕಾಕಾರರಿಗೆ ತಮ್ಮ ಬೌಲಿಂಗ್ ಮೂಲಕವೇ ಖಡಕ್ ಉತ್ತರ ನೀಡಿದ ಮೊಹಮ್ಮದ್ ಶಮಿ



















