ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್ಒ) 7 ಕೋಟಿಗೂ ಅಧಿಕ ಸದಸ್ಯರಿಗೆ ಸಿಹಿ ಸುದ್ದಿ ದೊರೆತಿದೆ. ವಾಟ್ಸ್ ಆ್ಯಪ್ ಮೂಲಕವೇ ಪಿಎಫ್ ಗೆ ಸಂಬಂಧಿಸಿದ ಹಲವು ಸೌಲಭ್ಯಗಳನ್ನು ಶೀಘ್ರದಲ್ಲೇ ಜಾರಿಗೆ ತರಲಾಗುತ್ತಿದೆ. ಈ ಕುರಿತು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಂಡಾವೀಯ ಅವರೇ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಸದಸ್ಯರು ಸುಲಭವಾಗಿ ಸೇವೆ ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಪಿಎಫ್ ಕಚೇರಿಗಳಿಗೆ ಅಲೆಯುವ ಜಂಜಾಟ ತಪ್ಪಿಸಲು ಮತ್ತು ಡಿಜಿಟಲ್ ಸೇವೆಗಳನ್ನು ಮತ್ತಷ್ಟು ಸರಳಗೊಳಿಸಲು ಇಪಿಎಫ್ಒ ಅಧಿಕೃತ ವಾಟ್ಸ್ ಆ್ಯಪ್ ಆಧಾರಿತ ಸೇವೆಗಳನ್ನು ಶೀಘ್ರದಲ್ಲೇ (ಮುಂದಿನ ಒಂದು ತಿಂಗಳೊಳಗೆ) ಪೂರ್ಣ ಪ್ರಮಾಣದಲ್ಲಿ ಆರಂಭಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ವಾಟ್ಸ್ ಆ್ಯಪ್ ಮೂಲಕ ಏನೆಲ್ಲ ಸೌಲಭ್ಯ?
- ಪಿಎಫ್ ಬ್ಯಾಲೆನ್ಸ್ ಪರಿಶೀಲನೆ : ನಿಮ್ಮ ಖಾತೆಯಲ್ಲಿ ಸದ್ಯ ಎಷ್ಟು ಹಣವಿದೆ ಎಂಬುದನ್ನು ತಕ್ಷಣವೇ ತಿಳಿಯಬಹುದು.
- ಕ್ಲೈಮ್ ಸ್ಟೇಟಸ್ ವಿವರ : ನೀವು ಹಣ ವಿತ್ಡ್ರಾ ಮಾಡಲು ಅಥವಾ ವರ್ಗಾವಣೆ ಮಾಡಲು ಅರ್ಜಿ ಸಲ್ಲಿಸಿದ್ದರೆ, ಅದರ ಸ್ಥಿತಿ (Status) ಏನಾಗಿದೆ ಎಂಬುದನ್ನು ಟ್ರ್ಯಾಕ್ ಮಾಡಬಹುದು.
- ಕೊನೆಯ 5 ವಹಿವಾಟುಗಳು : ನಿಮ್ಮ ಖಾತೆಗೆ ಜಮೆಯಾದ ಕೊನೆಯ 5 ಕಂತುಗಳ (Transactions) ವಿವರ ಸಿಗಲಿದೆ.
- ಖಾತೆಯ ಲೋಪದೋಷಗಳ ಸರಿಪಡಿಸುವಿಕೆ : ಆಧಾರ್ ಲಿಂಕ್ ಅಥವಾ ಡಿಬಿಟಿ ಬ್ಯಾಂಕ್ ಖಾತೆಯ ನ್ಯೂನತೆಗಳಿದ್ದರೆ ವಾಟ್ಸ್ ಆ್ಯಪ್ ಮೂಲಕವೇ ಇಪಿಎಫ್ಒ ನಿಮ್ಮನ್ನು ಸಂಪರ್ಕಿಸಿ ಸರಿಪಡಿಸಲಿದೆ.
ಅಲ್ಲದೆ, ಎಟಿಎಂ ಹಾಗೂ ಯುಪಿಎಐ ಮೂಲಕ ಪಿಎಫ್ ಹಣವನ್ನು ವಿತ್ ಡ್ರಾ ಮಾಡುವುದು ಸೇರಿ ಹಲವು ಡಿಜಿಟಲ್ ಸುಧಾರಣೆಗಳಿರುವ ಇಪಿಎಫ್ಒ 3.0 ವ್ಯವಸ್ಥೆ ಕೂಡ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ. ಒಟ್ಟಿನಲ್ಲಿ ಇಪಿಎಫ್ಒ ಗೆ ಸಂಬಂಧಿಸಿದ ಸೇವೆಗಳು ಇತ್ತೀಚೆಗೆ ಡಿಜಿಟಲ್ ಆಗುತ್ತಿರುವುದು ಸದಸ್ಯರಿಗೆ ಗುಡ್ ನ್ಯೂಸ್ ಆಗಿದೆ.
ಇದನ್ನೂ ಓದಿ : B.E, B.Tech ಮುಗಿಸಿದವರಿಗೆ ಶುಭ ಸುದ್ದಿ : ಕೇಂದ್ರ ಸರ್ಕಾರದ NCCBM ಸಂಸ್ಥೆಯಲ್ಲಿ 26 ಹುದ್ದೆಗಳ ನೇಮಕಾತಿ!



















