ಬೆಂಗಳೂರು : ರಾಜ್ಯ ಸರ್ಕಾರವು 70 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಈಗಾಗಲೇ ಸಾವಿರಾರು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಹಾಯ ಹಸ್ತ ಯೋಜನೆ ಜಾರಿಗೊಳಿಸಿದ್ದು, ಸುಮಾರು 90 ಸಾವಿರ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗ್ರಾಮೀಣ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ವಂಚಿತರಾಗದೆ, ಸರ್ಕಾರಿ ನೌಕರಿ ಪಡೆಯಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಯೋಜನೆ ಅಡಿಯಲ್ಲಿ 90 ಸಾವಿರ ಜನರಿಗೆ 3 ತಿಂಗಳು ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಆನ್ ಲೈನ್ ಮೂಲಕ ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ರಾಜ್ಯ ಸರ್ಕಾರದ ಅಧಿಕೃತ ಸೇವಾಸಿಂಧು ಪೋರ್ಟಲ್ https://sevaone.karnataka.gov.in/ ಗೆ ಭೇಟಿ ನೀಡಬೇಕು. ಮುಖಪುಟದಲ್ಲಿ ‘ಮುಖ್ಯಮಂತ್ರಿಯವರ ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ’ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಆಧಾರ್ ಕಾರ್ಡ್, ಶೈಕ್ಷಣಿಕ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಕೆ ನಂತರ, ನಿಮ್ಮ ಮೊಬೈಲ್ ಅಥವಾ ಇಮೇಲ್ ಗೆ ನೋಂದಣಿ ಸಂಖ್ಯೆ ಬರುತ್ತದೆ. ಇದನ್ನು ನೋಟ್ ಮಾಡಿಕೊಳ್ಳಬೇಕು.
ಸರ್ಕಾರದಿಂದ ಆನ್ ಲೈನ್ ತರಗತಿಗಳು ಆರಂಭವಾದಾಗ ನೀವು ಇದೇ ನೋಂದಣಿ ಸಂಖ್ಯೆಯನ್ನು ಲಾಗಿನ್ ಕ್ರೆಡಿನ್ಶಿಯಲ್ ಆಗಿ ಬಳಸುವ ಮೂಲಕ ನಿತ್ಯದ ತರಗತಿಗಳಿಗೆ ಲೈವ್ ಆಗಿ ಹಾಜರಾಗಬಹುದು. ಎಸ್ ಡಿಎ, ಎಫ್ ಡಿಎ, ಪಿಡಿಒ, ಪಿಎಸ್ಐ, ಶಿಕ್ಷಕರು ಸೇರಿ ಹಲವು ಹುದ್ದೆಗಳ ನೇಮಕಾತಿಗೆ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ 9 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಅಧ್ಯಯನ ಸಾಮಗ್ರಿಯನ್ನು ಕೂಡ ನೀಡಲಾಗುತ್ತದೆ.
ಇದನ್ನೂ ಓದಿ : ಪಂಜಾಬ್ ಕಾಂಗ್ರೆಸ್‌ನಲ್ಲಿ ಭಿನ್ನಮತ ಶಮನಕ್ಕೆ ಹೈಕಮಾಂಡ್ ತಂತ್ರ : ನೂತನ ರಾಜ್ಯಾಧ್ಯಕ್ಷರಾಗಿ ಪರ್ಗತ್ ಸಿಂಗ್ ನೇಮಕ!



















