ಬೆಂಗಳೂರು : ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಜನಪ್ರಿಯ Jawa 42 FJ ಮಾದರಿಯ ಹೊಸ ‘ಆಲ್ ಸ್ಟಾರ್ಸ್’ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ಬಣ್ಣಗಳ ಆಯ್ಕೆ, ನಿಯೋ-ಕ್ಲಾಸಿಕ್ ವಿನ್ಯಾಸ, 334 ಸಿಸಿ ಎಂಜಿನ್ ಹಾಗೂ ಆಧುನಿಕ ತಂತ್ರಜ್ಞಾನ ವೈಶಿಷ್ಟ್ಯಗಳೊಂದಿಗೆ ಈ ಬೈಕ್ ಅನ್ನು ಪರಿಚಯಿಸಲಾಗಿದೆ. ಇದರ ಆರಂಭಿಕ ಎಕ್ಸ್‌ಶೋರೂಮ್ ಬೆಲೆ 2,01,942 ರೂಪಾಯಿ ಆಗಿದೆ.
‘ಆಲ್ ಸ್ಟಾರ್ಸ್’ ಪರಿಕಲ್ಪನೆಯಡಿ ಪರಿಚಯಿಸಲಾಗುತ್ತಿರುವ ಮೊದಲ ಮೋಟಾರ್‌ಸೈಕಲ್ ಇದಾಗಿದೆ. ಟ್ರೆಂಡ್‌ಗಳನ್ನು ಅನುಸರಿಸುವುದಕ್ಕಿಂತ ತಮ್ಮದೇ ಆದ ವ್ಯಕ್ತಿತ್ವ ಮತ್ತು ಸವಾರಿ ಶೈಲಿಯನ್ನು ಹೊಂದಿರುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಸರಣಿಯನ್ನು ರೂಪಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
34 ಸಿಸಿ ಎಂಜಿನ್‌ನೊಂದಿಗೆ ಹೊಸ ಆವೃತ್ತಿ
ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್ ಬೈಕ್‌ನಲ್ಲಿ 334 ಸಿಸಿ ಸಾಮರ್ಥ್ಯದ ಆಲ್ಫಾ-2 ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 29.17 ಪಿಎಸ್ ಗರಿಷ್ಠ ಶಕ್ತಿ ಹಾಗೂ 29.62 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್‌ಗೆ 6-ವೇಗದ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಮಧ್ಯಮ ಸಾಮರ್ಥ್ಯದ ಕ್ಲಾಸಿಕ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಕಾರ್ಯಕ್ಷಮತೆ ಮತ್ತು ವೇಗವರ್ಧನೆಗೆ ಆದ್ಯತೆ ನೀಡುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಎಂಜಿನ್ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.
ನಿಯೋ-ಕ್ಲಾಸಿಕ್ ವಿನ್ಯಾಸಕ್ಕೆ ಹೊಸ ಸ್ಪರ್ಶ
ಹೊಸ ಆವೃತ್ತಿಯಲ್ಲಿ ಜಾವಾ 42 ಎಫ್‌ಜೆ ಮಾದರಿಯ ಮೂಲ ನಿಯೋ-ಕ್ಲಾಸಿಕ್ ವಿನ್ಯಾಸವನ್ನು ಉಳಿಸಿಕೊಳ್ಳಲಾಗಿದೆ. ಟ್ಯಾಂಕ್‌ನಲ್ಲಿ ಬ್ರಷ್ಡ್ ಅಲ್ಯೂಮಿನಿಯಂ ಪ್ಯಾನೆಲ್‌ಗಳನ್ನು ಅಳವಡಿಸಿರುವುದು ಈ ಮಾದರಿಯ ಪ್ರಮುಖ ವಿನ್ಯಾಸ ಬದಲಾವಣೆಗಳಲ್ಲಿ ಒಂದಾಗಿದೆ. ಸ್ಪೋರ್ಟಿ ಶೈಲಿಯೊಂದಿಗೆ ಕ್ಲಾಸಿಕ್ ವಿನ್ಯಾಸದ ಅಂಶಗಳನ್ನು ಸಂಯೋಜಿಸುವ ಪ್ರಯತ್ನವನ್ನು ಕಂಪನಿ ಮಾಡಿದೆ. ಸಂಪೂರ್ಣ ಎಲ್‌ಇಡಿ ಬೆಳಕಿನ ವ್ಯವಸ್ಥೆ ಹಾಗೂ ಡಿಜಿಟಲ್ ಉಪಕರಣ ಸಮೂಹವೂ ಬೈಕ್‌ನಲ್ಲಿದೆ.
ಸುರಕ್ಷತೆಗೆ ಡ್ಯುಯಲ್-ಚಾನೆಲ್ ಎಬಿಎಸ್
ಸುರಕ್ಷತೆಗಾಗಿ ಬೈಕ್‌ನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ವ್ಯವಸ್ಥೆ ನೀಡಲಾಗಿದೆ. ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಐದು ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಗ್ಯಾಸ್ ತುಂಬಿದ ಟ್ವಿನ್ ಶಾಕ್ ಅಬ್ಸಾರ್ಬರ್ ವ್ಯವಸ್ಥೆ ಇದೆ. ವಿವಿಧ ರಸ್ತೆ ಪರಿಸ್ಥಿತಿಗಳಲ್ಲಿ ಬೈಕ್‌ನ ಸ್ಥಿರತೆ ಮತ್ತು ಸವಾರಿಯ ಅನುಕೂಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ವ್ಯವಸ್ಥೆ ನೀಡಲಾಗಿದೆ.
ಸೀಟ್ ಎತ್ತರ, ಗ್ರೌಂಡ್ ಕ್ಲಿಯರೆನ್ಸ್ ವಿವರ
ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್ ಬೈಕ್‌ನ ಸೀಟ್ ಎತ್ತರ 790 ಎಂಎಂ ಆಗಿದೆ. ಗ್ರೌಂಡ್ ಕ್ಲಿಯರೆನ್ಸ್ 178 ಎಂಎಂ ಇದ್ದು, 12 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ನೀಡಲಾಗಿದೆ. ಬೈಕ್‌ನ ಒಟ್ಟು ತೂಕ 184 ಕೆ.ಜಿ. ಆಗಿದೆ.
ಆರು ಬಣ್ಣಗಳಲ್ಲಿ ಲಭ್ಯ
ಹೊಸ ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್ ಒಟ್ಟು ಆರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಅರೋರಾ ಗ್ರೀನ್ ಮತ್ತು ಆಲ್ ಸ್ಟಾರ್ಸ್ ರೆಡ್ ಬಣ್ಣಗಳ ಬೆಲೆ ತಲಾ 2,01,942 ರೂಪಾಯಿ ಆಗಿದೆ. ನೆಬ್ಯುಲಾ ಬ್ಲೂ, ಮ್ಯಾಟ್ ಬ್ಲ್ಯಾಕ್ ರೆಡ್ ಕ್ಲಾಡ್ ಹಾಗೂ ಮ್ಯಾಟ್ ಬ್ಲ್ಯಾಕ್ ಬ್ಲ್ಯಾಕ್ ಕ್ಲಾಡ್ ಬಣ್ಣಗಳ ಬೆಲೆ ತಲಾ 2,07,942 ರೂಪಾಯಿ ನಿಗದಿಪಡಿಸಲಾಗಿದೆ. ವಿಶೇಷ ಕ್ರೋಮ್ ಆವೃತ್ತಿಯ ಬೆಲೆ 2,15,942 ರೂಪಾಯಿ ಆಗಿದೆ. ಇವು ದೆಹಲಿ ಎಕ್ಸ್‌ಶೋರೂಮ್ ಬೆಲೆಗಳಾಗಿವೆ.
ವಾರಂಟಿ ಮತ್ತು ರಸ್ತೆಬದಿ ನೆರವು
ಹೊಸ ಬೈಕ್ ಖರೀದಿಸುವ ಗ್ರಾಹಕರಿಗೆ ಜಾವಾ ಯೆಜ್ಡಿ ವಿಸ್ತೃತ ವಾರಂಟಿ ಮತ್ತು ರಸ್ತೆಬದಿ ನೆರವು ಸೌಲಭ್ಯಗಳನ್ನು ನೀಡುತ್ತಿದೆ. ನಾಲ್ಕು ವರ್ಷ ಅಥವಾ 50,000 ಕಿಲೋಮೀಟರ್‌ವರೆಗೆ ಪ್ರಮಾಣಿತ ವಾರಂಟಿ ಲಭ್ಯವಿದ್ದು, ಅದನ್ನು ಆರು ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ. ಇದರ ಜತೆಗೆ ಎಂಟು ವರ್ಷಗಳವರೆಗೆ ರಸ್ತೆಬದಿ ನೆರವು ಹಾಗೂ ಐದು ವರ್ಷಗಳವರೆಗೆ ವಾರ್ಷಿಕ ನಿರ್ವಹಣಾ ಪ್ಯಾಕೇಜ್ ಆಯ್ಕೆಯನ್ನು ಕಂಪನಿ ಒದಗಿಸುತ್ತಿದೆ.
ದೇಶಾದ್ಯಂತ ಇರುವ 450ಕ್ಕೂ ಹೆಚ್ಚು ಜಾವಾ ಯೆಜ್ಡಿ ಮಾರಾಟ ಮಳಿಗೆಗಳಲ್ಲಿ ಹೊಸ ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್ ಬೈಕ್ ಬುಕ್ಕಿಂಗ್ ಮತ್ತು ಖರೀದಿಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ : “ವೈಯಕ್ತಿಕ ಸಾಧನೆಗಿಂತ ತಂಡದ ಗೆಲುವೇ ಮುಖ್ಯ” : ಲಂಕಾ ವಿರುದ್ಧ ಮಿಂಚಿ ‘ಸರಣಿ ಶ್ರೇಷ್ಠ’ ಪ್ರಶಸ್ತಿ ಮುಡಿಗೇರಿಸಿಕೊಂಡ ಪಡಿಕ್ಕಲ್



















