ನವದೆಹಲಿ : ರಾಷ್ಟ್ರ ರಾಜಧಾನಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ನಿನ್ನೆ(ಶನಿವಾರ) ತಡರಾತ್ರಿ ವರದಿಯಾಗಿದೆ. ಸ್ವಿಜರ್ಲೆಂಡ್‌ನ ಜ್ಯೂರಿಚ್‌ಗೆ ಹೊರಟಿದ್ದ ಸ್ವಿಸ್ ಏರ್ (SWISS) ವಿಮಾನವು ಟೇಕ್-ಆಫ್ ಆಗುತ್ತಿದ್ದಂತೆಯೇ ಅದರ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ವಿಮಾನದ ಹಾರಾಟವನ್ನು ರದ್ದುಗೊಳಿಸಿ, ತುರ್ತು ನಿರ್ಗಮನ ದ್ವಾರಗಳ ಮೂಲಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಈ ಆತಂಕಕಾರಿ ಘಟನೆಯಲ್ಲಿ ಆರು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟೇಕ್-ಆಫ್ ವೇಳೆ ಇಂಜಿನ್ ವೈಫಲ್ಯ
ಸ್ವಿಸ್ ಏರ್‌ಲೈನ್ಸ್‌ಗೆ ಸೇರಿದ ‘ಏರ್‌ಬಸ್ ಎ-330’ (ಫ್ಲೈಟ್ ಸಂಖ್ಯೆ LX147, ನೋಂದಣಿ HB-JHK) ವಿಮಾನವು 228 ಪ್ರಯಾಣಿಕರು ಹಾಗೂ ನಾಲ್ವರು ನವಜಾತ ಶಿಶುಗಳೊಂದಿಗೆ ದೆಹಲಿಯಿಂದ ಜ್ಯೂರಿಚ್‌ಗೆ ಪ್ರಯಾಣ ಬೆಳೆಸಲು ಸಜ್ಜಾಗಿತ್ತು. ರಾತ್ರಿ 1:08ರ ಸುಮಾರಿಗೆ ರನ್‌ವೇಯಲ್ಲಿ ವೇಗವಾಗಿ ಚಲಿಸುತ್ತಿದ್ದಾಗ, ವಿಮಾನದ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಅಪಾಯವನ್ನು ಅರಿತ ಪೈಲಟ್‌ಗಳು ತಕ್ಷಣವೇ ವಿಮಾನದ ಟೇಕ್-ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ. ರನ್‌ವೇಯಲ್ಲೇ ವಿಮಾನವನ್ನು ನಿಲ್ಲಿಸಿ, ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಯಾಣಿಕರನ್ನು ತೆರವುಗೊಳಿಸಲು ನಿರ್ಧರಿಸಲಾಯಿತು.
ತುರ್ತು ನಿರ್ಗಮನ ಸ್ಲೈಡ್‌ಗಳ ಮೂಲಕ ರಕ್ಷಣೆ
ವಿಮಾನವನ್ನು ರನ್‌ವೇಯಲ್ಲಿ ನಿಲ್ಲಿಸಿದ ತಕ್ಷಣ, ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಸಿಬ್ಬಂದಿ ಪ್ರಯಾಣಿಕರನ್ನು ವಿಮಾನದಿಂದ ಹೊರತರುವ ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿದರು. ವಿಮಾನದ ತುರ್ತು ನಿರ್ಗಮನ ಸ್ಲೈಡ್‌ಗಳನ್ನು (Emergency slides) ಬಳಸಿ ಎಲ್ಲಾ ಪ್ರಯಾಣಿಕರನ್ನು ರನ್‌ವೇಗೆ ಇಳಿಸಲಾಯಿತು. ಸ್ಲೈಡ್‌ಗಳನ್ನು ಬಳಸಲು ಸಾಧ್ಯವಾಗದ ಕೆಲವೇ ಕೆಲವು ಪ್ರಯಾಣಿಕರಿಗೆ ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಯಿತು. ಈ ಧಾವಂತದಲ್ಲಿ ಆರು ಜನ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರಿಗೆ ತಕ್ಷಣವೇ ವೈದ್ಯಕೀಯ ನೆರವು ಒದಗಿಸಲಾಗಿದೆ. ವಿಮಾನದ ಸಿಬ್ಬಂದಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಡೆದ ಈ ಆತಂಕಕಾರಿ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿವೆ.
ಉನ್ನತ ಮಟ್ಟದ ತನಿಖೆಗೆ ಆದೇಶ
ಈ ಘಟನೆ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸ್ವಿಸ್ ಏರ್‌ಲೈನ್ಸ್ ಸಂಸ್ಥೆ, ಪರಿಸ್ಥಿತಿ ನಿಭಾಯಿಸಲು ವಿಶೇಷ ಕಾರ್ಯಪಡೆಯನ್ನು ರಚಿಸಿದೆ. “ಇದೊಂದು ಅತ್ಯಂತ ಒತ್ತಡದ ಹಾಗೂ ಆತಂಕಕಾರಿ ಸನ್ನಿವೇಶವಾಗಿತ್ತು. ನಮ್ಮ ಸ್ಥಳೀಯ ತಂಡಗಳು ಪ್ರಯಾಣಿಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರಿಗೆ ಅಗತ್ಯವಾದ ಹೋಟೆಲ್ ವಸತಿ ಹಾಗೂ ಪರ್ಯಾಯ ವಿಮಾನ ವ್ಯವಸ್ಥೆಯನ್ನು ಕಲ್ಪಿಸುತ್ತಿವೆ.
ನಮ್ಮ ತಂಡಗಳು ಪ್ರಯಾಣಿಕರಿಗೆ ಸುಲಭವಾಗಿ ಸಂಪರ್ಕಿಸಲು ಅನುಕೂಲವಾಗುವಂತೆ ಕಾಂಟ್ಯಾಕ್ಟ್ ಕಾರ್ಡ್‌ಗಳನ್ನು ಸಹ ನೀಡಲಾಗಿದೆ,” ಎಂದು ಸಂಸ್ಥೆ ತಿಳಿಸಿದೆ. ಜೊತೆಗೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಮತ್ತು ವಿಮಾನವನ್ನು ತಪಾಸಣೆಗೊಳಪಡಿಸಲು ಸಂಸ್ಥೆಯ ತಾಂತ್ರಿಕ ತಜ್ಞರು ಶೀಘ್ರದಲ್ಲೇ ದೆಹಲಿಗೆ ಆಗಮಿಸಲಿದ್ದಾರೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಏರ್‌ಲೈನ್ಸ್ ಹೇಳಿದೆ.
ಇದನ್ನೂ ಓದಿ : ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ನೇಮಕಾತಿ – 2.2 ಲಕ್ಷ ರೂ. ಭರ್ಜರಿ ಸ್ಯಾಲರಿ



















