ಬೆಂಗಳೂರು : ಎಣ್ಣೆ ಏಟಲ್ಲಿ ಬೈಕ್ ಚಲಾಯಿಸಿದ ಸವಾರನೊಬ್ಬ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾದ ಘಟನೆ ಬೆಂಗಳೂರಿನ ಪಟ್ಟಣಗೆರೆ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಮದ್ಯದ ಅಮಲಿನಲ್ಲೇ ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಿದ್ದ ಸವಾರ, ಹಲವು ಕಿಲೋಮೀಟರ್‌ಗಳಷ್ಟು ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಿದ್ದಾನೆ.
ನಿಯಂತ್ರಣವಿಲ್ಲದೆ ಸಾಗುತ್ತಿದ್ದ ಬೈಕ್ ಕೊನೆಗೆ ರಸ್ತೆ ಬದಿಯಲ್ಲಿ ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಯ ಮೇಲೆಯೇ ಬಿದ್ದು ಗಾಯಗೊಂಡಿದ್ದಾನೆ. ಹಿಂಬದಿಯಿಂದ ಬರುತ್ತಿದ್ದ ವಾಹನ ಸವಾರರ ಮೊಬೈಲ್‌ನಲ್ಲಿ ಈ ದೃಶ್ಯ ಸಂಪೂರ್ಣವಾಗಿ ಸೆರೆಯಾಗಿದೆ.
ಅಪಘಾತದ ಬಳಿಕ ಸ್ಥಳೀಯರು ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಲ್ಮೆಟ್ ಧರಿಸದೆ ಹಾಗೂ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ್ದರಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಈ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ಇದೀಗ ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಕರಣದ ಕುರಿತು ಕೆಂಗೇರಿ ಸಂಚಾರ ವಿಭಾಗದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಮಳೆ ಕೊರತೆ ನಡುವೆ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್



















