ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಇಂದು ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆ ಸಮಾರಂಭ ನಡೆಯಲಿರುವ ಲೋಕಭವನ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಇಡೀ ಜಾಗವನ್ನು ವಿವಿಧ ಸೆಕ್ಟರ್‌ಗಳಾಗಿ ವಿಂಗಡಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಡಿಕೆ ಶಿವಕುಮಾರ್ ಪ್ರಮಾಣವಚನ ಸಮಾರಂಭದ ಯಶಸ್ವಿ ನಿರ್ವಹಣೆಗಾಗಿ ಬೆಂಗಳೂರು ನಗರದ ಪೊಲೀಸರ ಜೊತೆಗೆ ಬೇರೆ ಜಿಲ್ಲೆಗಳಿಂದಲೂ ಕೆಲವು ದಕ್ಷ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿದೆ. ಬಂದೋಬಸ್ತ್‌ಗಾಗಿ 3 ಮಂದಿ ಜಂಟಿ ಪೊಲೀಸ್ ಆಯುಕ್ತರು, 20ಕ್ಕೂ ಹೆಚ್ಚು ಡಿಸಿಪಿಗಳು (DCP), 50ಕ್ಕೂ ಹೆಚ್ಚು ಎಸಿಪಿಗಳು (ACP), 100ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು, 300ಕ್ಕೂ ಹೆಚ್ಚು ಪಿಎಸ್‌ಐಗಳು (PSI), 700ಕ್ಕೂ ಹೆಚ್ಚು ಕಾನ್ಸ್‌ಟೇಬಲ್‌ಗಳು ಹಾಗೂ ಕೆಎಸ್‌ಆರ್‌ಪಿ (KSRP) ತುಕಡಿಗಳು ಸೇರಿದಂತೆ ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತೆಯ ಉಸ್ತುವಾರಿಗಾಗಿ ಪ್ರತಿ ಸೆಕ್ಟರ್‌ಗೂ ಓರ್ವ ಡಿಸಿಪಿ ದರ್ಜೆಯ ಅಧಿಕಾರಿಗೆ ನೇತೃತ್ವದ ಜವಾಬ್ದಾರಿ ನೀಡಲಾಗಿದೆ.
ಲೋಕಭವನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕೇವಲ ವೆಹಿಕಲ್ ಪಾಸ್ (ವಾಹನ ಪಾಸ್) ಹೊಂದಿರುವ ವಿಐಪಿ ಹಾಗೂ ವಿವಿಐಪಿಗಳಿಗೆ ಮಾತ್ರವೇ ನೇರವಾಗಿ ಆವರಣದ ಒಳಗಡೆ ವಾಹನ ಚಾಲನೆ ಮಾಡಲು ಅನುಮತಿ ನೀಡಲಾಗಿದೆ. ಗಣ್ಯರೆಲ್ಲರೂ ಕಾರ್ಯಕ್ರಮ ಆರಂಭವಾಗುವ ಕನಿಷ್ಠ ಒಂದು ಗಂಟೆ ಮುಂಚಿತವಾಗಿಯೇ ಆಸನಗಳನ್ನು ಅಲಂಕರಿಸುವಂತೆ ಸೂಚಿಸಲಾಗಿದೆ. ಇನ್ನು ವಾಹನ ಪಾಸ್ ಇಲ್ಲದೆ ಆಗಮಿಸುವ ಗಣ್ಯರ ವಾಹನಗಳಿಗೆ ತಿಮ್ಮಯ್ಯ ಸರ್ಕಲ್ ಬಳಿಯೇ ನಿರ್ಬಂಧ ವಿಧಿಸಲಾಗಿದ್ದು, ಅಲ್ಲಿಂದ ಮುಂದೆ ಯಾವುದೇ ಖಾಸಗಿ ವಾಹನಗಳ ಪ್ರವೇಶ ಇರುವುದಿಲ್ಲ.
ಪಾಸ್ ಇಲ್ಲದ ಗಣ್ಯರನ್ನು ತಿಮ್ಮಯ್ಯ ಸರ್ಕಲ್‌ನಿಂದ ಲೋಕಭವನದ ಮುಖ್ಯ ವೇದಿಕೆಯವರೆಗೆ ಸುರಕ್ಷಿತವಾಗಿ ಕರೆತರಲು ವಿಶೇಷವಾಗಿ 6 ಸೀಟುಗಳ ಸಾಮರ್ಥ್ಯವಿರುವ ಎಲೆಕ್ಟ್ರಿಕ್ ಗಾಲ್ಫ್ ಕಾರ್ಟ್ (Golf Cart) ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಪಾಸ್ ಪಡೆದ ಗಣ್ಯರ ಅಧಿಕೃತ ಪಟ್ಟಿಯನ್ನು ಪೊಲೀಸರು ಪಡೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಡಿಕೆಶಿ ಸಿಎಂ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ; ಪ್ರಮಾಣವಚನ ಸ್ವೀಕರಿಸಲಿರುವ ಸಚಿವರಾರು?


















