ಬೆಂಗಳೂರು : ಕಾಂಗ್ರೆಸ್ ಕಟ್ಟಾಳು ಹಾಗೂ ಸಂಘಟನಾ ಚತುರ ಖ್ಯಾತಿಯ ಡಿ.ಕೆ ಶಿವಕುಮಾರ್ ಇಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಬೆಂಗಳೂರಿನ ಲೋಕಭವನದ ಗಾಜಿನ ಮನೆ (ಗ್ಲಾಸ್ ಹೌಸ್) ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದು, ಇಂದು (ಜೂನ್ 3) ಸಂಜೆ ಸರಿಯಾಗಿ 4 ಗಂಟೆ 5 ನಿಮಿಷದ ಶುಭ ಮುಹೂರ್ತದಲ್ಲಿ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.
ವೇದಿಕೆಯಲ್ಲಿ 20 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಸ್ವಾಮೀಜಿ, ಫಾದರ್ ಹಾಗೂ ಮೌಲ್ವಿ ಸೇರಿದಂತೆ ಸರ್ವಧರ್ಮಗಳ 55 ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ಅವರ ಸಮ್ಮುಖದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇನ್ನು, ಡಿ.ಕೆ ಶಿವಕುಮಾರ್ ಜೊತೆ 10 ರಿಂದ 13 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ಈ ಪಟ್ಟಿ ಫೈನಲ್ ಆಗಬೇಕಿದೆ. ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ, ವೇಣುಗೋಪಾಲ್, ಸುರ್ಜೇವಾಲಾ ಸೇರಿದಂತೆ ಹಲವು ಗಣ್ಯರಿಗೆ ಪ್ರಮಾಣವಚನಕ್ಕೆ ಆಹ್ವಾನ ನೀಡಲಾಗಿದೆ.
ಪ್ರಮಾಣವಚನದ ಬೆನ್ನಲ್ಲೇ ಕೊನೆಯ ಕ್ಷಣದವರೆಗೂ ಕ್ಯಾಬಿನೆಟ್ ಫೈನಲ್ ಮಾಡೋ ಕಸರತ್ತು ನಡೆದಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಸೇರಿದ್ದ ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಸಚಿವರ ಪಟ್ಟಿಯನ್ನು ಫೈನಲ್ ಮಾಡಿದ್ದಾರೆ. ಸಂಜೆ ಎಐಸಿಸಿ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್ ನಿವಾಸದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿದ್ದ ಕೈ ನಾಯಕರು ಪಟ್ಟಿ ಅಂತಿಮಗೊಳಿಸಿದ್ದಾರೆ. ಹೈಕಮಾಂಡ್ ಭೇಟಿ ಬಳಿಕ ಬೆಂಗಳೂರಿಗೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ಆಗಮಿಸಿದ್ದು, ಇಂದು 10 ಗಂಟೆಗೆ ನೂತನ ಸಚಿವರ ಪಟ್ಟಿ ರಿಲೀಸ್ ಆಗಲಿದ್ದು, ಡಿಕೆಶಿ ಜೊತೆ ಇವರೂ ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಂಭಾವ್ಯ ಸಚಿವರು
- ಡಾ.ಜಿ.ಪರಮೇಶ್ವರ್
- ಕೆ.ಜೆ.ಜಾರ್ಜ್
- ಎಂ.ಬಿ.ಪಾಟೀಲ್
- ಸತೀಶ್ ಜಾರಕಿಹೊಳಿ
- ಪ್ರಿಯಾಂಕ್ ಖರ್ಗೆ
- ರಾಮಲಿಂಗಾರೆಡ್ಡಿ
- ಯು.ಟಿ.ಖಾದರ್
- ಕೃಷ್ಣ ಬೈರೇಗೌಡ
- ಎನ್.ಚೆಲುವರಾಯಸ್ವಾಮಿ
- ಬೈರತಿ ಸುರೇಶ್
- ಡಾ.ಯತೀಂದ್ರ ಸಿದ್ದರಾಮಯ್ಯ
- ಕೆ.ಎಚ್.ಮುನಿಯಪ್ಪ/ ರೂಪಕಲಾ
ಸ್ಪೀಕರ್ ಸ್ಥಾನಕ್ಕೆ ಎಚ್‌ಕೆಪಿ ?
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸಂಪುಟಕ್ಕೆ ಸೇರ್ಪಡೆ ಆಗುತ್ತಿರುವುದರಿಂದ ನೂತನ ಸ್ಪೀಕರ್ ಆಗಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ದಿನೇಶ್ ಗುಂಡೂರಾವ್ ಹೆಸರೂ ಚರ್ಚೆಯಲ್ಲಿದೆ.
ಇದನ್ನೂ ಓದಿ : ಇಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆಶಿ ಪದಗ್ರಹಣ – ಮದುವಣಗಿತ್ತಿಯಂತೆ ಸಿಂಗಾರಗೊಂಡ ಲೋಕ ಭವನ!


















