ಬೆಂಗಳೂರು : ಕರ್ನಾಟಕದಲ್ಲಿ ಸ್ಥಳೀಯ ಸ್ವರಾಜ್ಯ ಸಂಸ್ಥೆಗಳಾದ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಂವಿಧಾನದಲ್ಲಿ ನಿಗದಿಪಡಿಸಿದ ಅವಧಿಯೊಳಗೆ ನಡೆಸದೆ ಉದ್ದೇಶಪೂರ್ವಕವಾಗಿ ಮುಂದೂಡಲಾಗುತ್ತಿದೆ. ನ್ಯಾಯಾಲಯಗಳ ಸೂಚನೆಗಳಿದ್ದರೂ ಚುನಾವಣೆಗಳನ್ನು ನಡೆಸದಿರುವುದು ಕಾನೂನಿನ ಆಳ್ವಿಕೆಗೆ ವಿರುದ್ಧವಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕರ್ನಾಟಕ ಸರ್ಕಾರದ ವಿರುದ್ದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ದೂರು ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಚುನಾವಣೆಯನ್ನು ನಿರಂತರವಾಗಿ ಮುಂದೂಡುವುದು ಸಂವಿಧಾನದ Articles 243 ರಿಂದ 243-0 ರಲ್ಲಿ ಹೇಳಿರುವ ಕಡ್ಡಾಯ ನಿಯಮಗಳನ್ನು ಉಲ್ಲಂಘಿಸುವಂತಾಗಿದೆ. ಇದರಿಂದ ಪ್ರಜಾಪ್ರಭುತ್ವದ ಮೂಲಭೂತ ತತ್ವವಾದ ವಿಕೇಂದ್ರೀಕರಣ ವ್ಯವಸ್ಥೆಗೆ ಆಡಳಿತ ಹಾನಿಯಾಗಿದೆ. ಹೀಗಾಗಿ ಸರ್ಕಾರದ ವಿರುದ್ದ ತಕ್ಷಣ ಕ್ರಮಕ್ಕೆ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಚುನಾವಣೆಗಳನ್ನು ನಿರಂತರವಾಗಿ ಮುಂದೂಡುವ ಮೂಲಕ ಜನಪ್ರತಿನಿಧಿಗಳಿಲ್ಲದ ಆಡಳಿತವನ್ನು ಮುಂದುವರಿಸಲಾಗುತ್ತಿದೆ, ಇದರಿಂದ ಸ್ಥಳೀಯ ಆಡಳಿತ ವ್ಯವಸ್ಥೆ ದುರ್ಬಲಗೊಂಡಿದ್ದು, ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳಾದ ಜನರ ಪ್ರತಿನಿದಿತ್ವ ಮತ್ತು ಪಾಲ್ಗೊಳ್ಳುವಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೇ 2023ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದ ಕರ್ನಾಟಕ ಸರ್ಕಾರವು ರಾಜ್ಯದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿದರೂ, ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಿರ್ಲಕ್ಷ್ಯಪೂರ್ವಕವಾಗಿ ಮುಂದೂಡಲಾಗಿದೆ. ಇದರಿಂದ ಮಹಿಳೆಯರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ದೊರೆಯಬೇಕಿದ್ದ ರಾಜಕೀಯ ಪ್ರತಿನಿಧಿತ್ವದ ಅವಕಾಶಗಳು ಕಸಿದುಕೊಳ್ಳಲ್ಪಟ್ಟಿವೆ. ಇದು ಸಂವಿಧಾನದಲ್ಲಿ ನೀಡಿರುವ ಸಾಮಾಜಿಕ ನ್ಯಾಯದ ತತ್ರಗಳಿಗೂ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತಗಳ ಅವಧಿ ಜೂನ್ 2021ರಲ್ಲಿ ಮುಗಿದಿದ್ದರೂ, ಇಂದಿಗೂ ಚುನಾವಣೆ ನಡೆಸಿಲ್ಲ. ಕ್ಷೇತ್ರ ಪುನರ್ವಿಂಗಡಣೆ ಪೂರ್ಣಗೊಂಡಿದ್ದರೂ ಮೀಸಲಾತಿ ಪ್ರಕಟಿಸುವಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡಲಾಗಿದೆ. ಈ ಕುರಿತು ಉಚ್ಚ ನ್ಯಾಯಾಲಯದ ಆದೇಶಗಳನ್ನು ಪಾಲಿಸದೇ, ದಂಡ ಪಾವತಿಸುವ ಮಟ್ಟಕ್ಕೆ ಸರ್ಕಾರ ಇಳಿದಿದೆ. ನ್ಯಾಯಾಲಯದ ನಿರ್ದೇಶನಗಳನ್ನು ನಿರ್ಲಕ್ಷಿಸುವುದು ಸಂವಿಧಾನದ Article 144 ರ ವಿರುದ್ಧವಾಗಿದ್ದು, ನ್ಯಾಯಾಂಗದ ಗೌರವವನ್ನು ಕುಗ್ಗಿಸುವ ಕಾರ್ಯವಾಗಿದೆ ಎಂದಿದ್ದಾರೆ.
ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಗಳ ಅವಧಿ ಮುಗಿದರೂ ಚುನಾವಣೆಗಳನ್ನು ನಡೆಸಲಾಗಿಲ್ಲ. ನಗರ ಪ್ರದೇಶಗಳಲ್ಲಿ ಜನಪ್ರತಿನಿಧಿಗಳ ಕೊರತೆಯಿಂದ ಸ್ಥಳೀಯ ಸಮಸ್ಯೆಗಳ ಪರಿಹಾರ ವಿಳಂಬಗೊಳ್ಳುತ್ತಿದೆ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಅಧಿಕಾರಿಗಳ ಕೈಯಲ್ಲಿ ಸೀಮಿತಗೊಂಡಿದ್ದು, ಜನರ ಉತ್ತರದಾಯಕತೆ ಇಲ್ಲದ ಆಡಳಿತ ರೂಪುಗೊಂಡಿದೆ. ಜನವರಿ 2026ರಲ್ಲಿ ಸುಮಾರು 6000 ಗ್ರಾಮ ಪಂಚಾಯತಗಳ ಅವಧಿ ಮುಗಿದಿದ್ದರೂ, ಮುಂಚಿತವಾಗಿ ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸಲು ಸರ್ಕಾರ ವಿಫಲವಾಗಿದೆ. ಇದು ಸಂವಿಧಾನದ 243-E ವಿಧಿಯಲ್ಲಿ ನಿಗದಿಪಡಿಸಿರುವ ಐದು ವರ್ಷದ ಅವಧಿ ನಿಯಮವನ್ನು ಉಲ್ಲಂಘಿಸುತ್ತದೆ. ಗ್ರಾಮೀಣ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಗ್ರಾಮೀಣ ಅಭಿವೃದ್ಧಿಗೆ ತೀವ್ರ ಹಾನಿಯಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ.
ಈ ಎಲ್ಲಾ ವಿಚಾರಗಳನ್ನು ಸಮಗ್ರವಾಗಿ ಪರಿಗಣಿಸಿ, ಕರ್ನಾಟಕ ರಾಜ್ಯದಲ್ಲಿ ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಚುನಾವಣೆಯನ್ನು ಇನ್ನಷ್ಟು ವಿಳಂಬವಿಲ್ಲದೆ ತಕ್ಷಣ ನಡೆಸುವಂತೆ ಕರ್ನಾಟಕ ಸರ್ಕಾರಕ್ಕೆ ಕಟ್ಟುನಿಟ್ಟಿನ ಹಾಗೂ ಬಾಧ್ಯತೆಯ ನಿರ್ದೇಶನಗಳನ್ನು ನೀಡುವಂತೆ ರಾಷ್ಟ್ರಪತಿಗಳಿಗೆ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಮೀನು ಹಿಡಿಯಲು ಹೋದ ವ್ಯಕ್ತಿ ನದಿಯಲ್ಲಿ ಮುಳುಗಿ ಸಾವು!



















