ಬೆಂಗಳೂರು : ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ ಬಾಲಕಿಯ ಸಾವಿನ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ. ಅಕ್ರಮ ಸಂಬಂಧ ಮತ್ತು ಮಗುವಿನ ಬಣ್ಣದ ವಿಚಾರವೇ ಐದು ವರ್ಷದ ಬಾಲಕಿಯ ಸಾವಿಗೆ ಕಾರಣವಾಗಿರಬಹುದು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಕಾಡುಗೋಡಿ ಠಾಣೆಯಲ್ಲಿ ತಾಯಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಾಗಿದೆ.
ದಾವಣಗೆರೆಯ ಪ್ರವೀಣ್ ಮತ್ತು ಬೆಂಗಳೂರಿನ ಪ್ರಿಯಾಂಕ 2007ರಲ್ಲಿ ವಿವಾಹವಾಗಿದ್ದರು. ದಂಪತಿಗೆ 17 ವರ್ಷದ ಹಾಗೂ 5 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದರು. ಕೆಲ ವರ್ಷಗಳ ಹಿಂದೆ ಪ್ರಿಯಾಂಕಗೆ ಕಾಲೇಜು ದಿನಗಳ ಗೆಳೆಯ ಮೋಹನ್ ಮತ್ತೆ ಸಂಪರ್ಕಕ್ಕೆ ಬಂದಿದ್ದ. ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಲಿವ್-ಇನ್ ಸಂಬಂಧದಲ್ಲಿದ್ದರೆಂದು ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ ಪ್ರಿಯಾಂಕ ವಿಚ್ಛೇದನಕ್ಕೆ ಒತ್ತಾಯಿಸಿದ್ದಾಳೆ ಎಂದು ಪತಿ ಪ್ರವೀಣ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ಪ್ರಿಯಾಂಕ ಕಾಡುಗೋಡಿ ವ್ಯಾಪ್ತಿಯ ಸೀಗೆಹಳ್ಳಿಯ ವಿಲ್ಲಾದಲ್ಲಿ ಮೋಹನ್ ಜೊತೆ ವಾಸವಾಗಿದ್ದು, ಕಿರಿಯ ಮಗಳನ್ನೂ ತನ್ನ ಜೊತೆಯಲ್ಲೇ ಇರಿಸಿಕೊಂಡಿದ್ದಳು ಎನ್ನಲಾಗಿದೆ.
ಮಾರ್ಚ್ 24ರಂದು ಐದು ವರ್ಷದ ವೆನ್ನಿಲಾ ಎಂಬ ಬಾಲಕಿ ಇದ್ದಕ್ಕಿದ್ದಂತೆ ಮೃತಪಟ್ಟಿದ್ದಳು. ಮಗುವಿನ ಸಾವಿನ ಬಗ್ಗೆ ವಿಚಾರಿಸಿದಾಗ, ಒಮ್ಮೆ ಬಿರಿಯಾನಿ ತಿನ್ನಿಸಿದ್ದೆ, ಮತ್ತೊಮ್ಮೆ ಐಸ್‌ಕ್ರೀಂ ಕೊಟ್ಟು ಎಸಿ ಕಾರಿನಲ್ಲಿ ಮಲಗಿಸಿದ್ದೆ. ಮನೆಗೆ ಬಂದ ಬಳಿಕ ಬೆಳಿಗ್ಗೆ ನೋಡಿದಾಗ ಮಗು ಮೃತಪಟ್ಟಿತ್ತು ಎಂದು ಪ್ರಿಯಾಂಕ ಹೇಳಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ ಮಗುವಿನ ಮರಣೋತ್ತರ ಪರೀಕ್ಷೆ ವರದಿಯನ್ನು ವಿದೇಶದಲ್ಲಿರುವ ಸಂಬಂಧಿ ವೈದ್ಯರಿಗೆ ತೋರಿಸಿದಾಗ, ಸಾವಿನ ಹಿಂದೆ ಅನುಮಾನಾಸ್ಪದ ಅಂಶಗಳಿರುವ ಸಾಧ್ಯತೆಯನ್ನು ಅವರು ಸೂಚಿಸಿದ್ದಾರೆ. ಇದರಿಂದ ಅನುಮಾನಗೊಂಡ ತಂದೆ ಪ್ರವೀಣ್, ತನ್ನ ಮಗಳನ್ನು ಹೊಡೆದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದಲ್ಲಿ ಕಾಡುಗೋಡಿ ಪೊಲೀಸರು ಪ್ರಿಯಾಂಕ ಹಾಗೂ ಆಕೆಯ ಗೆಳೆಯ ಮೋಹನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಮೋಹನ್‌ನನ್ನು ಬಂಧಿಸಿರುವ ಪೊಲೀಸರು, ನಾಪತ್ತೆಯಾಗಿರುವ ಪ್ರಿಯಾಂಕಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಇತ್ತ ಮೃತ ಬಾಲಕಿಯ ಎಫ್‌ಎಸ್‌ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಹಾಗೂ ಆರೋಪಗಳ ಸತ್ಯಾಸತ್ಯತೆ ಬೆಳಕಿಗೆ ಬರುವ ನಿರೀಕ್ಷೆಯಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಮಿಡ್‌ನೈಟ್ ಸಿಎಂ ಡಿಕೆಶಿ-ರಾಮಲಿಂಗಾ ರೆಡ್ಡಿ ರಹಸ್ಯ ಮೀಟಿಂಗ್ – ಸಂಧಾನವೋ? ರಾಜೀನಾಮೆ ಮುಂದುವರಿಕೆಯೋ?


















