ಬಳ್ಳಾರಿ : ರಸ್ತೆ ಕಾಮಗಾರಿಗಾಗಿ ತೆಗೆದಿದ್ದ ಗುಂಡಿಗೆ ಬೈಕ್ ಸಮೇತ ಬಿದ್ದ ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದು, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ನಡೆದಿದೆ.
ಮೃತರನ್ನು ಮಂಜುಳ (36) ಎಂದು ಗುರುತಿಸಲಾಗಿದ್ದು, ಅವರು ರಾವಿಹಾಳ್ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪತಿ ಚಂದ್ರಶೇಖರ್ (46) ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾ ಬಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ರಾತ್ರಿ ಸಿರುಗುಪ್ಪದಿಂದ ರಾವಿಹಾಳ್ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಚಾಣಕನೂರು ಕ್ರಾಸ್ ಸಮೀಪದ ರಾಜ್ಯ ಹೆದ್ದಾರಿ-63ರಲ್ಲಿ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಕಾಮಗಾರಿಗಾಗಿ ತೆಗೆದಿದ್ದ ಗುಂಡಿಯನ್ನು ಗಮನಿಸದೇ ಬೈಕ್ ಅದರೊಳಗೆ ಬಿದ್ದ ಪರಿಣಾಮ ದಂಪತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ತೀವ್ರತೆಗೆ ಮಂಜುಳ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಗಾಯಗೊಂಡ ಚಂದ್ರಶೇಖರ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಪ್ರಿಯಕರನ ಜೊತೆ ಸೇರಿ ಮಗಳನ್ನೇ ಕೊಂದ್ಲಾ ತಾಯಿ? ಪತ್ನಿ ವಿರುದ್ದ ಪತಿ ಗಂಭೀರ ಆರೋಪ!


















