ಬೆಂಗಳೂರು: ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಪದೇಪದೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಕಂದಾಯ ಇಲಾಖೆಯ ಸೇವೆಗಳನ್ನು ಮತ್ತಷ್ಟು ಸರಳ ಮತ್ತು ಪಾರದರ್ಶಕಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ‘ನಮೂನೆ 16 ಎ’ ಸಂಯೋಜಿತ ಪಹಣಿ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ನೂತನ ಡಿಜಿಟಲ್ ವ್ಯವಸ್ಥೆಯ ಮೂಲಕ ಭೂಮಾಲೀಕರಿಗೆ ಒಂದೇ ದಾಖಲೆಯಲ್ಲಿ ಜಮೀನಿನ ಸಮಗ್ರ ವಿವರಗಳು ಲಭ್ಯವಾಗಲಿವೆ.
ಒಂದೇ ದಾಖಲೆಯಲ್ಲಿ ಸಮಗ್ರ ಭೂದಾಖಲೆ ಮತ್ತು ಭೂ-ಆಧಾರ್
ನೂತನವಾಗಿ ಪರಿಚಯಿಸಲಾಗಿರುವ ನಮೂನೆ 16 ‘ಎ’ ಪಹಣಿಯಲ್ಲಿ ಭೂ ಮಾಲೀಕತ್ವದ ವಿವರ, ಮಾಲೀಕರ ಭಾವಚಿತ್ರ, ಜಮೀನಿನ ವಿಸ್ತೀರ್ಣ, ಭೂಮಿಯ ನಕ್ಷೆ, ಆಕಾರ್ ಬಂದ್ ಹಾಗೂ ಫಾರ್ಮರ್ ಐಡಿ ಸೇರಿದಂತೆ ಎಲ್ಲಾ ಪ್ರಮುಖ ಮಾಹಿತಿಗಳನ್ನು ಒಂದೇ ದಾಖಲೆಯಲ್ಲಿ ಒದಗಿಸಲಾಗುತ್ತದೆ. ಪಹಣಿಯಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮ್ಯುಟೇಷನ್, ಋಣಭಾರ ಪ್ರಮಾಣಪತ್ರ (ಇ.ಸಿ.) ಹಾಗೂ ಇತರ ಸಂಬಂಧಿತ ಭೂದಾಖಲೆಗಳನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ. ಅಲ್ಲದೆ, ಪ್ರತಿಯೊಂದು ಆಸ್ತಿಗೂ ಮಾಲೀಕತ್ವದ ನಿಖರ ವಿವರವುಳ್ಳ 14 ಸಂಖ್ಯೆಗಳ ವಿಶಿಷ್ಟ ‘ಭೂ-ಆಧಾರ್’ ಸಂಖ್ಯೆಯನ್ನು ನೀಡಲಾಗುತ್ತಿದ್ದು, ಇದು ಭೂದಾಖಲೆಗಳ ತಿರುಚುವಿಕೆ ಮತ್ತು ನಕಲಿ ದಾಖಲೆ ಸೃಷ್ಟಿಯಂತಹ ವಂಚನೆಗಳಿಗೆ ಕಡಿವಾಣ ಹಾಕಲು ನೆರವಾಗಲಿದೆ. ಜಿಪಿಎಸ್ ತಂತ್ರಜ್ಞಾನದ ನೆರವಿನಿಂದ ಭೂಮಿಯ ನಿಖರ ಸ್ಥಳ, ಗಡಿ ಹಾಗೂ ನೀರಾವರಿ ಸೌಲಭ್ಯದ ಮಾಹಿತಿಯನ್ನೂ ತಿಳಿದುಕೊಳ್ಳಲು ಈ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮೂರು ತಿಂಗಳಲ್ಲಿ ಒಂದು ಕೋಟಿ ಪಹಣಿ ಪರಿವರ್ತನೆ ಗುರಿ
ರಾಜ್ಯದಲ್ಲಿರುವ ಒಟ್ಟು ಸುಮಾರು 2.1 ಕೋಟಿ ಪಹಣಿಗಳ ಪೈಕಿ ಈಗಾಗಲೇ 9.59 ಲಕ್ಷ ನಮೂನೆ 16 ‘ಎ’ ಸಂಯೋಜಿತ ಪಹಣಿಗಳು ಸಿದ್ಧಗೊಂಡಿದ್ದು, ಉಳಿದ 6 ಲಕ್ಷ ಪಹಣಿಗಳ ಪರಿವರ್ತನೆ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ಮೂರು ತಿಂಗಳ ಒಳಗಾಗಿ ಕನಿಷ್ಠ 1 ಕೋಟಿ ಪಹಣಿಗಳನ್ನು ಈ ನೂತನ ವ್ಯವಸ್ಥೆಯಡಿ ತರುವ ಗುರಿಯನ್ನು ಕಂದಾಯ ಇಲಾಖೆ ಹೊಂದಿದೆ. ಕರ್ನಾಟಕದಲ್ಲಿ ಜಾರಿಗೊಳಿಸಲಾಗಿರುವ ಈ ಸುಧಾರಿತ ಭೂದಾಖಲೆ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಅಧಿಕಾರಿಗಳೂ ಅಧ್ಯಯನ ನಡೆಸಿದ್ದು, ರೈತರ ಅಲೆದಾಟ ತಪ್ಪಿಸಿ ಇಲಾಖೆಯನ್ನು ಸಂಪೂರ್ಣ ಜನಸ್ನೇಹಿ ಹಾಗೂ ಡಿಜಿಟಲ್ ವ್ಯವಸ್ಥೆಯನ್ನಾಗಿ ರೂಪಿಸಲು ಸರ್ಕಾರ ಮುಂದಾಗಿದೆ.


















