ಬೆಂಗಳೂರು: ರಾಜ್ಯದ ನಗರಗಳನ್ನು ಮತ್ತಷ್ಟು ದಕ್ಷ, ಸುಸ್ಥಿರ, ಜನಸ್ನೇಹಿ ಹಾಗೂ ವಾಸಯೋಗ್ಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ನಗರ ಯೋಜನೆ, ಸಂಚಾರ ವ್ಯವಸ್ಥೆ ಮತ್ತು ಸಾರ್ವಜನಿಕ ಸಾರಿಗೆ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದ ಉತ್ತಮ ಮಾದರಿಗಳನ್ನು ಅಧ್ಯಯನ ಮಾಡುತ್ತಿದೆ. ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗೋಯಾ ನಗರದ ಅತ್ಯಾಧುನಿಕ ಮೂಲಸೌಕರ್ಯ ಹಾಗೂ ಸಾರಿಗೆ ವ್ಯವಸ್ಥೆಗಳನ್ನು ವೀಕ್ಷಿಸಿ, ಅವುಗಳನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳುವ ಸಾಧ್ಯತೆಗಳ ಕುರಿತು ಆಸಕ್ತಿ ವ್ಯಕ್ತಪಡಿಸಿದ್ದಾರೆ.
ನಗೋಯಾದ ಸಕಾಯ್ ಭೂಗತ ಸಂಪರ್ಕ ಜಾಲದ ಅಧ್ಯಯನ
ಜಪಾನ್ ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗೋಯಾ ನಗರದಲ್ಲಿರುವ ‘ಸಕಾಯ್’ (Sakae) ಭೂಗತ ಸಂಪರ್ಕ ಜಾಲವನ್ನು ಪರಿಶೀಲಿಸಿದರು. ಮೆಟ್ರೋ ನಿಲ್ದಾಣಗಳು, ಪ್ರಮುಖ ವಾಣಿಜ್ಯ ಕೇಂದ್ರಗಳು ಹಾಗೂ ದೊಡ್ಡ ಕಟ್ಟಡಗಳನ್ನು ಭೂಗತ ಪಾದಚಾರಿ ಮಾರ್ಗಗಳು ಮತ್ತು ವ್ಯಾಪಾರ ಮಳಿಗೆಗಳ ಮೂಲಕ ಒಂದಕ್ಕೊಂದು ಬೆಸೆಯುವ ಸಮಗ್ರ ವ್ಯವಸ್ಥೆ ಇದಾಗಿದೆ. ನಗರ ಪ್ರದೇಶದ ಸ್ಥಳಾವಕಾಶವನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳುವುದು ಹಾಗೂ ರಸ್ತೆ ಮೇಲಿನ ಸಂಚಾರ ದಟ್ಟಣೆಯನ್ನು ತಗ್ಗಿಸಿ ಸುಗಮ ನಗರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈ ಮಾದರಿಯು ಮಹತ್ವದ ಒಳನೋಟಗಳನ್ನು ನೀಡಿದೆ.
ಟೊಯೋಟಾ ‘ಜೆಪಿಎನ್ ಟ್ಯಾಕ್ಸಿ’ ಉತ್ಪಾದನೆ ಮತ್ತು ಬಳಕೆಗೆ ಆಸಕ್ತಿ
ಇದೇ ವೇಳೆ ಮುಖ್ಯಮಂತ್ರಿಗಳು ಟೊಯೋಟಾ ಸಂಸ್ಥೆಯ ‘ಜೆಪಿಎನ್ ಟ್ಯಾಕ್ಸಿ’ (JPN TAXI) ಮಾದರಿಯನ್ನು ವೀಕ್ಷಿಸಿ ಅದರ ತಾಂತ್ರಿಕ ವಿಶೇಷತೆಗಳ ಬಗ್ಗೆ ಮಾಹಿತಿ ಪಡೆದರು. ಎಲ್ಪಿಜಿ–ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರುವ ಈ ಟ್ಯಾಕ್ಸಿಯು ವಿಶಾಲವಾದ ಒಳಾಂಗಣ, ಅಗಲವಾದ ಸ್ಲೈಡಿಂಗ್ ಬಾಗಿಲುಗಳು, ಪ್ರಯಾಣಿಕರು ಸುಲಭವಾಗಿ ಹತ್ತಿ ಇಳಿಯಲು ಅನುಕೂಲವಾಗುವ ಕೆಳಮಟ್ಟದ ನೆಲಹಾಸು (ಲೋ-ಫ್ಲೋರ್) ಹಾಗೂ ಗಾಲಿಕುರ್ಚಿ (ವೀಲ್ಚೇರ್) ಬಳಸುವವರಿಗೂ ಸುಲಭವಾಗಿ ಪ್ರವೇಶಿಸಲು ಪೂರಕವಾದ ವಿನ್ಯಾಸವನ್ನು ಹೊಂದಿದೆ. ಪರಿಸರ ಸ್ನೇಹಿ ಮತ್ತು ಅಂಗವಿಕಲ ಸ್ನೇಹಿಯಾಗಿರುವ ಈ ಟ್ಯಾಕ್ಸಿ ಮಾದರಿಯನ್ನು ಕರ್ನಾಟಕದಲ್ಲಿ ಪರಿಚಯಿಸುವ ಹಾಗೂ ರಾಜ್ಯದಲ್ಲೇ ಅದರ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಸಾಧ್ಯತೆಗಳ ಕುರಿತು ಮುಖ್ಯಮಂತ್ರಿಗಳು ಆಸಕ್ತಿ ತೋರಿದ್ದಾರೆ.
ನಗರ ಆಧುನೀಕರಣಕ್ಕೆ ಜಪಾನ್ ಮಾದರಿ ಪೂರಕ
ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳನ್ನು ಆಧುನೀಕರಿಸುವ, ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಸುಧಾರಿಸುವ ಹಾಗೂ ನಾಗರಿಕರ ಜೀವನಮಟ್ಟವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ. ಜಪಾನ್ನ ಸುಧಾರಿತ ನಗರ ಸಂಚಾರ ಪರಿಹಾರಗಳು ಮತ್ತು ಮೂಲಸೌಕರ್ಯ ನಿರ್ವಹಣಾ ವ್ಯವಸ್ಥೆಗಳು ರಾಜ್ಯದ ಭವಿಷ್ಯದ ನಗರಾಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿವೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.


















