ನವದೆಹಲಿ : ದೇಶದ ರಾಜಧಾನಿ ದೆಹಲಿಯ ಸತ್ಯನಿಕೇತನ ಪ್ರದೇಶದಲ್ಲಿ 5 ಮಹಡಿಯ ಪಿಜಿ(ಪೇಯಿಂಗ್ ಗೆಸ್ಟ್) ಕಟ್ಟಡ ಕುಸಿದು ಬಿದ್ದು 7 ಮಂದಿ ಪ್ರಾಣ ಕಳೆದುಕೊಂಡ ಭೀಕರ ದುರಂತದ ಬೆನ್ನಲ್ಲೇ, ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ)ಇದೀಗ ಕುಸಿದ ಕಟ್ಟಡಕ್ಕೆ ಹೊಂದಿಕೊಂಡಿರುವ ಮತ್ತೊಂದು ಕಟ್ಟಡವನ್ನು ನೆಲಸಮಗೊಳಿಸಲು ನಿರ್ಧರಿಸಿದೆ. ಪಕ್ಕದ ಕಟ್ಟಡವೂ ತೀವ್ರವಾಗಿ ಹಾನಿಗೊಳಗಾಗಿದ್ದು, ಅಪಾಯಕಾರಿ ಹಂತ ತಲುಪಿರುವ ಹಿನ್ನೆಲೆಯಲ್ಲಿ ಅದನ್ನು ನಾಳೆ ಹಂತ-ಹಂತವಾಗಿ ಕೆಡವಲು ನಿರ್ಧರಿಸಲಾಗಿದೆ.
ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಹಾನಿಗೊಳಗಾದ ಕಟ್ಟಡಕ್ಕೆ 18 ರಿಂದ 20 ಕಬ್ಬಿಣದ ಗಾರ್ಡ್ರೈಲ್ಗಳ ಆಸರೆ ನೀಡಿ ನಿಲ್ಲಿಸಲಾಗಿದೆ. ಎಂಸಿಡಿ ಆಯುಕ್ತ ಸಂಜೀವ್ ಖಿರ್ವಾರ್ ಈ ಕುರಿತು ಮಾಹಿತಿ ನೀಡಿ, ಕಟ್ಟಡವು ಸಂಪೂರ್ಣವಾಗಿ ದುರ್ಬಲಗೊಂಡಿದ್ದು, ಸುರಕ್ಷತೆಯ ದೃಷ್ಟಿಯಿಂದ ಮುಂದಿನ ಒಂದೆರಡು ದಿನಗಳಲ್ಲಿ ಯೋಜನಾಬದ್ಧವಾಗಿ ಅದನ್ನು ಧ್ವಂಸಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಲು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಈ ಕಟ್ಟಡ ತೆರವುಗೊಳಿಸುವ ನಿರ್ಧಾರವನ್ನು ಖಚಿತಪಡಿಸಿದ್ದಾರೆ.
ಕಂಬಗಳು ಮತ್ತು ಬೀಮ್ಗಳೇ ಇಲ್ಲದ ಕಟ್ಟಡ
ತಜ್ಞರ ಪ್ರಕಾರ, ದುರಂತಕ್ಕೀಡಾದ ಮತ್ತು ಅದರ ಪಕ್ಕದ ಕಟ್ಟಡಗಳ ನಿರ್ಮಾಣದಲ್ಲಿ ಗಂಭೀರ ಭದ್ರತಾ ಲೋಪಗಳಿದ್ದವು. ತಳಮಹಡಿಯಲ್ಲಿ ಯಾವುದೇ ಪಿಲ್ಲರ್ (ಕಂಬ) ಹಾಗೂ ಬೀಮ್ಗಳ ಆಸರೆಯೇ ಇಲ್ಲದೆ ನಿರ್ಮಾಣ ಮಾಡಲಾಗಿತ್ತು. ಕಾಲಕ್ರಮೇಣ ನಿಯಮಗಳನ್ನು ಗಾಳಿಗೆ ತೂರಿ ಒಂದೊಂದೇ ಮಹಡಿಗಳನ್ನು ಹೆಚ್ಚಿಸುತ್ತಾ ಹೋಗಲಾಗಿತ್ತು. ಮೂಲತಃ 1970ರ ದಶಕದಲ್ಲಿ ಪುನರ್ವಸತಿ ಯೋಜನೆಯಡಿ ಕೇವಲ ‘ಗ್ರೌಂಡ್ + 1’ ಮಹಡಿಗೆ ಮಾತ್ರ ಅನುಮತಿ ಇದ್ದ ಜಾಗದಲ್ಲಿ, ನೆಲಮಹಡಿ ಸೇರಿ ನಾಲ್ಕು ಮಹಡಿಗಳನ್ನು ಅಕ್ರಮವಾಗಿ ಎಬ್ಬಿಸಲಾಗಿತ್ತು. ಬಾಯ್ಸ್ ಹಾಸ್ಟೆಲ್ ಆಗಿ ಬಳಕೆಯಾಗುತ್ತಿದ್ದ ಈ ಕಟ್ಟಡಕ್ಕೆ ಯಾವುದೇ ಅಧಿಕೃತ ಅನುಮೋದಿತ ನಕ್ಷೆಯೂ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ.
ನಗರದಾದ್ಯಂತ ಪಿಜಿ ಮತ್ತು ಕಟ್ಟಡಗಳ ಆಡಿಟ್ಗೆ ಆದೇಶ
ಈ ದುರಂತದ ನಂತರ ಎಂಸಿಡಿ ಸುತ್ತಮುತ್ತಲಿನ ಆರು ಕಟ್ಟಡಗಳಿಗೆ ಸೀಲ್ ಹಾಕಿದೆ. ಜೊತೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಸರ್ದಾರ್ ತರಂಜೀತ್ ಸಿಂಗ್ ಸಂಧು ಅವರು ನಗರದಲ್ಲಿರುವ ಎಲ್ಲಾ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗಳ ವೈಜ್ಞಾನಿಕ ಮತ್ತು ರಚನಾತ್ಮಕ ಆಡಿಟ್ ನಡೆಸುವಂತೆ ಆದೇಶಿಸಿದ್ದಾರೆ. ವಿಶೇಷವಾಗಿ ಎತ್ತರ ಮತ್ತು ಮಹಡಿಗಳ ಮಿತಿ ಉಲ್ಲಂಘಿಸಿರುವ ಪಿಜಿಗಳ ಪರಿಶೀಲನೆ ನಡೆಸಲು ಒಂದು ವಾರದ ಗಡುವು ನೀಡಲಾಗಿದೆ. ಆದರೆ, ಈ ತಪಾಸಣೆ ಮತ್ತು ಸೀಲ್ ಮಾಡುವ ಪ್ರಕ್ರಿಯೆಯಿಂದಾಗಿ ವಿದ್ಯಾರ್ಥಿಗಳು ಬೀದಿಗೆ ಬೀಳದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಮತ್ತೊಂದೆಡೆ, ನಗರದ ಎಲ್ಲಾ ವಲಯಗಳ ಕಾರ್ಯನಿರ್ವಾಹಕ ಎಂಜಿನಿಯರ್ಗಳು ತಮ್ಮ ವ್ಯಾಪ್ತಿಯ ಅಸುರಕ್ಷಿತ ಕಟ್ಟಡಗಳನ್ನು ಪರಿಶೀಲಿಸಿ ಸೆಪ್ಟೆಂಬರ್ 10 ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಎಂಸಿಡಿ ಆದೇಶಿಸಿದೆ. ಈ ವರದಿಯನ್ನು ದೆಹಲಿ ಹೈಕೋರ್ಟ್ಗೆ ಸಲ್ಲಿಸಲಾಗುವ ಪ್ರಮಾಣಪತ್ರದಲ್ಲಿ ಅಳವಡಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಅನಧಿಕೃತ ನಿರ್ಮಾಣಗಳ ಹಾವಳಿ ಹೆಚ್ಚಾಗಿದ್ದು, ಜೂನ್ನಲ್ಲಿ ನಡೆದ ಸಮೀಕ್ಷೆಯಲ್ಲಿ 28 ಲಕ್ಷ ಕಟ್ಟಡಗಳ ಪೈಕಿ ಕೇವಲ 19 ಅಪಾಯಕಾರಿ ಕಟ್ಟಡಗಳನ್ನು ಪತ್ತೆಹಚ್ಚಲಾಗಿತ್ತು ಎಂಬುದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ : ಇ-ಕಾಮರ್ಸ್, ಆನ್ಲೈನ್ ಘಟಕಗಳ ಮೇಲೆ FDA ದಾಳಿ ; 42 ಲಕ್ಷ ಮೌಲ್ಯದ ಅವಧಿ ಮೀರಿದ ಆಹಾರ ಉತ್ಪನ್ನ ವಶ!



















