ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಇದೀಗ ಹಾಡಹಗಲೇ ಕಳ್ಳನೊಬ್ಬ ಪಿಜಿಗೆ ನುಗ್ಗಿ ಲ್ಯಾಪ್ಟಾಪ್ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ನಗರದ HAL ಪೊಲೀಸ್ ಠಾಣಾ ವ್ಯಾಪ್ತಿಯ ಅಶ್ವಥ್ ನಗರದಲ್ಲಿರುವ CSR ಜಂಟ್ಸ್ ಪಿಜಿಯಲ್ಲಿ ಈ ಕೃತ್ಯ ನಡೆದಿದ್ದು, ಕಳ್ಳನ ಕೈಚಳಕ ಪಿಜಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಾಹಿತಿಯ ಪ್ರಕಾರ, ಕಳ್ಳನು ಮೊದಲು ಪಿಜಿ ಸುತ್ತಮುತ್ತ ಕೆಲಕಾಲ ಓಡಾಡಿ ಪರಿಸ್ಥಿತಿಯನ್ನು ಗಮನಿಸಿದ್ದಾನೆ. ಬಳಿಕ ಯಾರೂ ಗಮನಿಸದ ಕ್ಷಣದಲ್ಲಿ ಪಿಜಿ ಒಳಗಡೆ ನುಗ್ಗಿ ಡೈನಿಂಗ್ ಹಾಲ್‌ನಲ್ಲಿ ಇಟ್ಟಿದ್ದ ಲ್ಯಾಪ್ಟಾಪ್ ಬ್ಯಾಗ್ ಅನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಘಟನೆ ನಡೆದ ವೇಳೆ ಪಿಜಿಯಲ್ಲಿದ್ದವರು ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಕಳ್ಳತನ ನಡೆದಿರುವುದು ತಡವಾಗಿ ಗೊತ್ತಾಗಿದೆ. ಕಳ್ಳನ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.
ಪಿಜಿಯ ಒಳಭಾಗದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಕಳ್ಳನು ಅತ್ಯಂತ ಚಾಕಚಕ್ಯತೆಯಿಂದ ಒಳನುಗ್ಗಿ ಲ್ಯಾಪ್ಟಾಪ್ ಬ್ಯಾಗ್ ತೆಗೆದುಕೊಂಡು ಹೊರಹೋಗುತ್ತಿರುವ ದೃಶ್ಯಗಳು ದಾಖಲಾಗಿವೆ. ಕಳ್ಳತನ ನಡೆದ ಬಳಿಕ ಪಿಜಿಯ ನಿವಾಸಿಗಳು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಾಡಹಗಲೇ ನಡೆದ ಈ ಕಳ್ಳತನ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದ್ದು, ಭದ್ರತೆ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಲ್ಯಾಪ್ಟಾಪ್ ಕಳ್ಳತನ ಸಂಬಂಧ ಕಾರ್ತಿಕೇಯ ಎಂಬುವವರು HAL ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ಇಂತಹ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸರು ಸಾರ್ವಜನಿಕರು ಹಾಗೂ ಪಿಜಿ ನಿರ್ವಹಣೆಯವರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಸಿಡಿಲು ಬಡಿದು ಐಆರ್‌ಬಿ ಕಾರ್ಮಿಕ ದುರ್ಮರಣ!


















