ಒಡಿಶಾ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ನಾಳೆ ಆಂಧ್ರ, ಒಡಿಶಾ ಕರಾವಳಿ ತೀರಕ್ಕೆ “ಮೊಂಥಾ” ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಚಂಡಮಾರುತವೂ ಗೋಪಾಲಪುರದಿಂದ ಸುಮಾರು 860 ಕಿ.ಮೀ ಮತ್ತು ಕಾಕಿನಾಡದಿಂದ 710 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ. ಈ ಚಂಡಮಾರುತವೂ ಅಕ್ಟೋಬರ್ 28ರಂದು ತೀವ್ರವಾಗುವ ನಿರೀಕ್ಷೆ ಇದೆ ಎಂದು ಐಎಂಡಿ ತಿಳಿಸಿದೆ
ಮೊಂಥಾ ಚಂಡಮಾರುತವು ಒಡಿಶಾದ ಮೇಲೆ ನೇರ ಪರಿಣಾಮ ಬೀರುವ ನಿರೀಕ್ಷೆಯಿಲ್ಲದಿದ್ದರೂ, ಅಕ್ಟೋಬರ್ 28 ರಿಂದ 29 ರವರೆಗೆ ರಾಜ್ಯದ ದಕ್ಷಿಣ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಮುನ್ಸೂಚನೆ ಹಿನ್ನೆಲೆ ಮಳೆ ಪರಿಣಾಮಗಳನ್ನು ತಗ್ಗಿಸುವ ಕುರಿತು ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದೆ.
ವಿಪತ್ತು ಪ್ರತಿಕ್ರಿಯೆ ಕಾರ್ಯವಿಧಾನವನ್ನು ಸಕ್ರಿಯಗೊಳಿಸಲಾಗಿದ್ದು, ಚಂಡಮಾರುತದ ಪರಿಣಾಮ ಎದುರಿಸುವ ನಿಟ್ಟಿನಲ್ಲಿ ಸಮಗ್ರ ಸನ್ನದ್ಧತಾ ಯೋಜನೆ ರೂಪಿಸಲಾಗಿದೆ. ದುರ್ಬಲ ಪ್ರದೇಶಗಳಲ್ಲಿರುವ ಜನರು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ವಿಶೇಷ ಪರಿಹಾರ ಆಯುಕ್ತರು ಜನರ ಸ್ಥಳಾಂತರಕ್ಕೆ 128 ತಂಡಗಳನ್ನು ನಿಯೋಜಿಸಿದೆ.
ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಎಚ್ಚರಿಕೆ ನೀಡಲಾಗಿರುವ 9 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹಾಗೇ ಈ 9 ಜಿಲ್ಲೆಗಳಲ್ಲಿ ಜಿಲ್ಲೆಯ ಅಧಿಕಾರಿಗಳು ಮತ್ತು ಉದ್ಯೋಗಿಗಳ ರಜೆ ರದ್ದು ಮಾಡಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಮೊಂಥಾ ಚಂಡಮಾರುತದ ಪರಿಣಾಮಗಳನ್ನು ಸಮರ್ಥವಾಗಿ ನಿಭಾಯಿಸುವ ಪ್ರಯತ್ನವಾಗಿ ಪರಿಹಾರ ಕಾರ್ಯಗಳನ್ನು ಭಾನುವಾರದಿಂದಲೇ ಚುರುಕುಗೊಳಿಸಲಾಗಿದ್ದು, ರಾಜ್ಯದೆಲ್ಲೆಡೆ ಈ ಪ್ರಯತ್ನಗಳ ಕುರಿತು ಒಡಿಶಾ ಸರ್ಕಾರ ಖಚಿತಪಡಿಸಿಕೊಂಡಿದೆ. ವಿದ್ಯುತ್ ಇಲಾಖೆಗೆ ಕೂಡ ನಿಯಮಿತ ಪೂರೈಕೆಗೆ ಸೂಚನೆ ನೀಡಲಾಗಿದ್ದು, ಆಸ್ಪತ್ರೆ, ತುರ್ತು ಶಸ್ತ್ರಚಿಕಿತ್ಸೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಬ್ಯಾಕ್ ಅಪ್ ಒದಗಿಸುವ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ.
ಅಲರ್ಟ್: ಚಂಡ ಮಾರುತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಒಡಿಶಾ ಸರ್ಕಾರ ಸೂಚಿತ ಜಿಲ್ಲೆಗಳಲ್ಲಿ ಅಕ್ಟೋಬರ್ 28 ಮತ್ತು 20 ರಂದು ಎರಡು ದಿನ ಅಂಗನವಾಡಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿದೆ. ಗಂಜಾಂ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳು ಅಕ್ಟೋಬರ್ 27 ಮತ್ತು 28 ರಂದು ಮುಚ್ಚಲಿವೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊರಡಿಸಿದ ಪ್ರಕಟಣೆಯ ಅನುಸಾರ, ಐಎಂಡಿ ಎಚ್ಚರಿಕೆ ಹಿನ್ನೆಲೆಯಲ್ಲಿ ಸೂಚಿತ ಜಿಲ್ಲೆಗಳಾದ ಗಂಜಾಂ, ಗಜಪತಿ, ರಾಯಗಡ, ಕೊರಾಪುಟ್, ಮಲ್ಕಂಗಿರಿ, ಕಂಧಮಾಲ್, ಕಲಹಂಡಿ ಮತ್ತು ನಬರಂಗಪುರ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವುದಾಗಿ ತಿಳಿಸಿದೆ.
ಮಲ್ಕಾನ್‌ಗಿರಿ, ನಬರಂಗಪುರ, ಕೊರಾಪುಟ್, ರಾಯಗಡ, ಗಜಪತಿ, ಕಲಹಂಡಿ, ಕಂಧಮಾಲ್ ಮತ್ತು ಗಂಜಾಂಗಳನ್ನು ರೆಡ್ ಅಲರ್ಟ್ ಪ್ರದೇಶಗಳೆಂದು ಘೋಷಿಸಲಾಗಿದೆ. ಖೋರ್ಧಾ, ಪುರಿ, ನಯಾಗಢ, ಭದ್ರಕ್, ಕೇಂದ್ರಪಾರ ಮತ್ತು ಜಗತ್‌ಸಿಂಗ್‌ಪುರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಕೂಡ ಹೆಚ್ಚಿನ ಪರಿಣಾಮ ಎದುರಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : ಬೆಳಗಾವಿ | ವರ್ಕ್ ಫ್ರಂ ಹೋಮ್ ಹೆಸರಲ್ಲಿ 8 ಸಾವಿರ ಮಹಿಳೆಯರಿಗೆ 12 ಕೋಟಿ ರೂ. ವಂಚಿಸಿ ಪರಾರಿಯಾದ ಭೂಪ!



















