ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏ.5ರಂದು ಸಿಎಸ್‌ಕೆ ಹಾಗೂ ಆರ್‌ಸಿಬಿ ನಡುವೆ ನಡೆದ ಪಂದ್ಯದ ವೇಳೆ `ದೋಸೆ, ಇಡ್ಲಿ, ಚಟ್ನಿ’ ಹಾಡು ಪ್ರಸಾರ ಮಾಡಿದ್ದಕ್ಕಾಗಿ ಬಿಸಿಸಿಐಗೆ ಸಿಎಸ್‌ಕೆ ದೂರು ನೀಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ `ದೋಸೆ, ಇಡ್ಲಿ, ಚಟ್ನಿ’ ಹಾಡನ್ನು ಪ್ರಸಾರ ಮಾಡಿದ್ದು ಸರಿಯಾಗಿರಲಿಲ್ಲ. ಅಲ್ಲದೇ ಚೆನ್ನೈ ತಂಡದ ಆಟಗಾರರ ಬಗ್ಗೆ ಟೀಕೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಸಿಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ ಕಾಸಿ ವಿಶ್ವನಾಥನ್ ಅವರು ಈ ಬಗ್ಗೆ ಮಾತನಾಡಿ, ಪಂದ್ಯದ ವೇಳೆ ಸಾಮಾನ್ಯವಾಗಿ ಸಕಾರಾತ್ಮಕ ವಾತಾವರಣ ಸೃಷ್ಟಿಸಲು ಹಾಡು ಪ್ರಸಾರ ಮಾಡುತ್ತಾರೆ. ಜೊತೆಗೆ ತವರಿನಲ್ಲಿ ಆಡುವ ತಂಡಗಳಿಗೆ ಹಾಡುಗಳು ಬೆಂಬಲ ನೀಡುತ್ತವೆ. ಆದರೆ, ಎದುರಾಳಿ ತಂಡಗಳನ್ನು ಟೀಕಿಸುವಂತಿರಬಾರದು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಕಿದ ಹಾಡು ವಿಭಿನ್ನ ರೀತಿಯಲ್ಲಿತ್ತು. ನಮ್ಮ ಆಟಗಾರರ ವಿರುದ್ಧ ಕೆಲ ಕಾಮೆಂಟ್ ಮಾಡಿದ್ದಾರೆ. ಇದನ್ನು ಪರಿಗಣಿಸಿ, ಪರಿಶೀಲಿಸಲು ಬಿಸಿಸಿಐಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು, ಐಪಿಎಲ್ ಆಡಳಿತ ಮಂಡಳಿಯು ಈ ದೂರನ್ನು ಗಂಭೀರವಾಗಿ ಪರಿಗಣಿಸಿದೆ. ಕ್ರೀಡಾಂಗಣಗಳಲ್ಲಿ ಮನರಂಜನೆಯ ಹೆಸರಿನಲ್ಲಿ ವರ್ಣಭೇದ ಅಥವಾ ಪ್ರಾದೇಶಿಕ ನಿಂದನೆಯಂತಹ ಅಂಶಗಳು ನುಸುಳದಂತೆ ನೋಡಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆಯಿದೆ.
ನಿನ್ನೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಗೆಲುವಿನೊಂದಿಗೆ ಆರ್‌ಸಿಬಿ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಸಿಎಸ್‌ಕೆ ಸದ್ಯ ಆಡಿರುವ 5 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು 4 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಭಾರಿ ಅಗ್ನಿ ಅವಘಡ – ಇಡ್ಲಿ ಸ್ಟೀಮರ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗಿಸಿದ ಹೋಟೆಲ್!



















