ಉಡುಪಿ : ಹಿಂದುಳಿದ ವರ್ಗದ ನಾಯಕರಿಗೆ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಐತಿಹಾಸಿಕ ದ್ರೋಹ ಬಗೆದಿದೆ. ಅಂದು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರನ್ನು ಹೀನಾಯವಾಗಿ ಪಟ್ಟದಿಂದ ಇಳಿಸಿದ ರೀತಿಯಲ್ಲೇ, ಇಂದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸುವ ಮೂಲಕ ಓಬಿಸಿ ಸಮುದಾಯದ ರಾಜಕೀಯ ಉತ್ಕರ್ಷವನ್ನು ತಾನು ಸಹಿಸುವುದಿಲ್ಲ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಉಳುವವನೇ ಹೊಲದೊಡೆಯ ಕಾಯ್ದೆ ಜಾರಿ ಸೇರಿದಂತೆ ಕರ್ನಾಟಕದಲ್ಲಿ ಕ್ರಾಂತಿಕಾರಿ ಆಡಳಿತ ನೀಡುವ ಮೂಲಕ ದೇವರಾಜ್ ಅರಸು ಅವರು ಜನಮನ್ನಣೆ ಗಳಿಸಿದ್ದರು. ಆದರೆ ಅವರ ಜನಪ್ರಿಯತೆಯನ್ನು ಸಹಿಸದ ಇಂದಿರಾ ಗಾಂಧಿಯವರು ಅರಸು ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಅರಸು ಅವರ ನಂತರ ಕರ್ನಾಟಕ ಹಾಗೂ ರಾಷ್ಟ್ರ ಮಟ್ಟದ ಜನಪ್ರಿಯ ಓಬಿಸಿ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನು ಈಗ ರಾಹುಲ್ ಗಾಂಧಿ ಪದಚ್ಯುತಿಗೊಳಿಸಿದ್ದಾರೆ. ನೂಲಿನಂತೆ ಸೀರೆ ಎಂಬಂತೆ, ಗಾಂಧಿ ಕುಟುಂಬದ ಡಿಎನ್‌ಎಯಲ್ಲೇ ಓಬಿಸಿ ನಾಯಕರ ಬಗ್ಗೆ ದ್ವೇಷ, ಈರ್ಷೆ ಹಾಗೂ ಅಸಹನೆ ಅಡಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಒಂದೆಡೆ ತಾನು ಓಬಿಸಿ ಸಮುದಾಯದ ಧ್ವನಿಯನ್ನು ಆಲಿಸುವುದಕ್ಕೆ ವಿಳಂಬ ಮಾಡಿದೆ, ಜಾತಿ ಗಣತಿ ನಡೆಸಿ ಓಬಿಸಿ ಸಮುದಾಯಕ್ಕೆ ನ್ಯಾಯ ಕೊಡುತ್ತೇನೆಂದು ವೇದಿಕೆಗಳಲ್ಲಿ ರಾಜಕೀಯ ಭಾಷಣ ಮಾಡುವ ರಾಹುಲ್ ಗಾಂಧಿ, ಇನ್ನೊಂದೆಡೆ ಅದೇ ಓಬಿಸಿ ಸಮುದಾಯದ ರಾಜಕೀಯ ನಾಯಕರನ್ನು ಅಧಿಕಾರದಿಂದ ಎಳೆದು ಕೆಡವುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದ್ದ ಒಬ್ಬನೇ ಒಬ್ಬ ಓಬಿಸಿ ಮುಖ್ಯಮಂತ್ರಿಯನ್ನು ಯಾಕೆ ಪದಚ್ಯುತಿಗೊಳಿಸಿದಿರಿ? ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ದೇಶದ ಜನತೆಗೆ ಉತ್ತರಿಸಬೇಕಾಗುತ್ತದೆ” ಎಂದು ಶಾಸಕ ವಿ.ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಭಾವುಕ ಪೋಸ್ಟ್.. ಹೇಳಿದ್ದೇನು?



















