ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 11ರಂದು ನಡೆದಿರುವ ಘಟನೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಹೈನಾಸ್ ಎಂಬಾತನ ವಿರುದ್ಧ ಯುವತಿ ಗಂಭೀರ ಆರೋಪ ಮಾಡಿದ್ದು, ಇದೀಗ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ, ಬಿಡುವಿನ ವೇಳೆಯಲ್ಲಿ ಮೋಮೊಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಇದೇ ವೇಳೆ ಅಂಗಡಿಯನ್ನು ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಅಂಗಡಿ ಮಾಲೀಕರಾದ ಗೋಶ್ ಮತ್ತು ಅತುಲ್ ಖರೀದಿದಾರರ ಹುಡುಕಾಟದಲ್ಲಿದ್ದರು. ಈ ವ್ಯವಹಾರಕ್ಕೆ ಮಧ್ಯವರ್ತಿಯಾಗಿ ಹೈನಾಸ್ ಎಂಬಾತ ಬಂದಿದ್ದಾನೆ ಎಂದು ತಿಳಿದುಬಂದಿದೆ.
ಬಳಿಕ ಅಂಗಡಿ ಮಾರಾಟದ ವಿಚಾರವಾಗಿ ಅತುಲ್, ಗೋಶ್, ಹೈನಾಸ್ ಹಾಗೂ ಯುವತಿ ಸೇರಿ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ಅತುಲ್ ಮತ್ತು ಗೋಶ್ ಊಟ ತರಲು ಹೊರಗೆ ಹೋಗಿದ್ದ ಸಮಯದಲ್ಲಿ ಹೈನಾಸ್ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಘಟನೆ ಬಳಿಕ ಆತಂಕಗೊಂಡ ಯುವತಿ ಸಹಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.
ದೂರು ನೀಡಿದರೂ ಪೊಲೀಸರಿಂದ ನಿರ್ಲಕ್ಷ್ಯ ಆರೋಪ..!
ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಗೆ ಯುವತಿ ದೂರು ನೀಡಲು ತೆರಳಿದ್ದರೂ, ಆರಂಭದಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಯುವತಿಯನ್ನೇ ಹೀಯಾಳಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ. ಇದರಿಂದ ಮನನೊಂದ ಸಂತ್ರಸ್ತೆ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದಾಳೆ.
ಸಂತ್ರಸ್ತೆಯ ಮನವಿ ಮತ್ತು ಹಿರಿಯ ಅಧಿಕಾರಿಗಳ ಹಸ್ತಕ್ಷೇಪದ ನಂತರ ಮಡಿವಾಳ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದೆ. ಆರೋಪಿಯಾಗಿರುವ ಹೈನಾಸ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಘಟನೆಯ ಸಂಪೂರ್ಣ ವಿವರ ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ – ಹಣಕ್ಕಾಗಿ ಸ್ನೇಹಿತೆಗೆ ಚಟ್ಟ ಕಟ್ಟಲು ಯತ್ನಿಸಿದ ಕಿರಾತಕಿ ಅರೆಸ್ಟ್!


















