ಉಡುಪಿ : ಮಣಿಪಾಲದ ಶಾಂತಿನಗರದ ಬಳಿಯ ರೂಮ್ ಒಂದರಲ್ಲಿ ಅಂಕೋಲದ ಯೋಗೀತಾ (23) ಎಂಬಾಕೆಯ ಕೊಲೆಗೆ ಯತ್ನಿಸಿ ಚಿನ್ನಾಭರಣ ಕದ್ದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಯೋಗೀತಾಳ ಪಕ್ಕದ ರೂಮಿನಲ್ಲಿಯೇ ವಾಸವಾಗಿದ್ದ ಸ್ನೇಹಿತೆಯನ್ನ ಬಂಧಿಸಿದ್ದಾರೆ. ಅಂಕೋಲಾ ತಾಲೂಕಿನ ಖೇಣಿ ಬಾವಿಕೇರಿ ಗ್ರಾಮದ ಸುಷ್ಮಾ ಅಣ್ಣಪ್ಪ ನಾಯ್ಕ(31) ಬಂಧಿತ ಆರೋಪಿ.
ಏನಿದು ಘಟನೆ?
ಯೋಗಿತಾ ಹಾಗೂ ಸ್ನೇಹಿತೆಯರಾದ ನಾಗರತ್ನ, ಗಗನಾ ಮತ್ತು ಮೇಘಾ ಗೌಡ ಮಣಿಪಾಲದ ಬಾಡಿಗೆ ರೂಮ್‌ನಲ್ಲಿದ್ದರು. ಮೇಘಾ, ನಾಗರತ್ನ ಮತ್ತು ಗಗನಾ ಮೇ 12ರಂದು ರಾತ್ರಿ ಪಾಳಿ ಕೆಲಸಕ್ಕೆ ಹೋಗಿ ಮೇ 13ರ ಬೆಳಗ್ಗೆ 7.15ಕ್ಕೆ ವಾಪಸ್ ಬಂದಾಗ ರೂಮಿನ ಬಾಗಿಲು ತೆರೆದಿತ್ತು. ಒಳಗೆ ನೋಡಿದಾಗ ಯೋಗಿತಾ ತಲೆಗೆ ಬಲವಾದ ಪೆಟ್ಟಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಅಲ್ಲದೆ ಆಕೆಯ ಮೈಮೇಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ತಕ್ಷಣ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿಶೇಷ ತಂಡ ರಚಿಸಿ ಸ್ಥಳದ ಸುತ್ತಲಿನ ಸಿಸಿಟಿವಿಗಳನ್ನು ಪರಿಶೀಲನೆ ಮತ್ತು ಸುತ್ತಲಿನ ಸಂಶಯಿತ ವ್ಯಕ್ತಿಗಳನ್ನು ವಿಚಾರಿಸಿದ್ದಾರೆ. ಕೊನೆಗೆ ಪೊಲೀಸರು ಸಂಶಯಗೊಂಡು ಯೋಗೀತಾಳ ಪಕ್ಕದ ರೂಮಿನಲ್ಲಿ ವಾಸವಾಗಿದ್ದ ಸ್ನೇಹಿತೆ ಸುಷ್ಮಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಈ ವೇಳೆ ಆರೋಪಿತೆ ಈ ಕೃತ್ಯ ಎಸಗಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಹಣಕಾಸಿನ ತೊಂದರೆಗೆ ಸ್ನೇಹಿತೆಯ ಕೊಲೆಗೆ ಯತ್ನ :
ವಿಚಾರಣೆ ವೇಳೆ ಆರೋಪಿತೆ ಸುಷ್ಮಾಗೆ ತೀವ್ರ ಹಣಕಾಸಿನ ತೊಂದರೆ ಇದ್ದು, ಮನೆಯವರು ಹಣಕ್ಕಾಗಿ ಪೀಡಿಸುತ್ತಿದ್ದರು ಎನ್ನುವುದು ತಿಳಿದು ಬಂದಿದೆ. ತಾನು ದುಡಿಯುವ ಹಣ ಸ್ವಂತ ಖರ್ಚಿಗೆ ಮಾತ್ರ ಸಾಕಾಗುತ್ತಿದ್ದರಿಂದ ಕಳೆದ 3 ವರ್ಷಗಳಿಂದೆ ಊರಿಗೆ ಹಣ ಕಳುಹಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಮನೆಯವರು ಕೆಲಸ ಬಿಟ್ಟು ಊರಿಗೆ ಬರುವಂತೆ ಒತ್ತಾಯಿಸಿದ್ದರು.
ಹೇಗಾದರೂ ಮಾಡಿ ಹಣ ಹೊಂದಿಸುವ ಉದ್ದೇಶದಿಂದ ಮೇ 12ರ ರಾತ್ರಿ ಯೋಗಿತಾಳ ರೂಮ್‌ಗೆ ಹೋಗಿ ಆಕೆಯ ಜೊತೆ ಮಲಗಿದ್ದಾಳೆ. ಬಳಿಕ ಬೆಳಗಿನ ಜಾವ 4.30ಕ್ಕೆ ಯೋಗಿತಾ ನಿದ್ದೆಯಲ್ಲಿದ್ದಾಗ ಸುಷ್ಮಾ ಮುಂಚಿತವಾಗಿಯೇ ತಂದಿಟ್ಟುಕೊಂಡಿದ್ದ ಕಾಂಕ್ರೀಟ್ ಹಾಲೋ ಬ್ಲಾಕ್ ಕಲ್ಲನ್ನು ಯೋಗಿತಾ ತಲೆಗೆ ಹಾಕಿ ಕೊಲೆಗೆ ಯತ್ನಿಸಿ, ಚಿನ್ನದ ಸರ ಹಾಗೂ ಕಿವಿಯ ಬೆಂಡೋಲೆ ದೋಚಿದ್ದಾಳೆ. ಕೃತ್ಯದ ಬಳಿಕ ಏನೂ ತಿಳಿಯದವಳಂತೆ ಯೋಗಿತಾಳ ಸ್ನೇಹಿತೆಯರ ಜೊತೆ ಸೇರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವ ನಾಟಕವಾಡಿದ್ದಾಳೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಸದ್ಯ ಸುಷ್ಮಾಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ ಯತ್ನ – ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಪಾಪಿಗಳು!



















