ಉಡುಪಿ : ತಮಿಳುನಾಡು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಇಂದು ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ವಿಜಯ್, ಉಡುಪಿ ಜಿಲ್ಲೆಯ ಪ್ರಸಿದ್ದ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ತಾಯಿಯ ದರ್ಶನ ಪಡೆದಿದ್ದಾರೆ.
ಸಿಎಂ ವಿಜಯ್ ಅವರಿಗೆ ಹೂಗುಚ್ಛ ನೀಡಿ ಕೊಲ್ಲೂರು ದೇಗುಲದ ಆಡಳಿತ ಮಂಡಳಿಯ ಟ್ರಸ್ಟಿಗಳು ಸ್ವಾಗತ ಕೋರಿದ್ದು, ಮಂತ್ರಘೋಷದೊಂದಿಗೆ ಕ್ಷೇತ್ರದೊಳಗೆ ಅರ್ಚಕ ವೃಂದ ಬರಮಾಡಿಕೊಂಡಿತು.
ಶಲ್ಯ ಧರಿಸಿ ಆಗಮಿಸುವ ಮೂಲಕ ಸಿಎಂ ವಿಜಯ್ ದೇವಸ್ಥಾನದ ಶಿಷ್ಟಾಚಾರ ಪಾಲನೆ ಮಾಡಿದ್ದು, ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಸಂಕಲ್ಪ ಪೂಜೆ ನೆರವೇರಿಸಲಾಯಿತು.
ದೇವಾಲಯ ಪ್ರವೇಶಕ್ಕೂ ಮುನ್ನ ವಿಜಯ್ ಅವರು ದೇವಾಲಯದ ಧ್ವಜಸ್ತಂಭಕ್ಕೆ ನಮಸ್ಕರಿಸಿ ಭಕ್ತಿಭಾವದಿಂದ ಒಳ ಪ್ರವೇಶಿಸಿದರು. ಅರ್ಚಕರ ಸಮ್ಮುಖದಲ್ಲಿ ಸಂಕಲ್ಪ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಅವರು, ಮೂಕಾಂಬಿಕಾ ದೇವಿಯ ಆಶೀರ್ವಾದ ಪಡೆದರು.
ಪೂಜೆಯ ನಂತರ ವಿಜಯ್ ಅವರು ದೇವಾಲಯದ ಸುತ್ತು ಪೌಳಿಯಲ್ಲಿರುವ ವಿವಿಧ ಉಪದೇವತೆಗಳ ದೇಗುಲಗಳಿಗೂ ಭೇಟಿ ನೀಡಿದರು. ವೀರಭದ್ರ, ಆಂಜನೇಯ ಹಾಗೂ ಗಣಪತಿ ದೇವಸ್ಥಾನಗಳಲ್ಲಿ ನಮಸ್ಕರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಸೇರಿದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆಯಿಂದ 1.10 ಲಕ್ಷ ಮಹಿಳೆಯರನ್ನು ಕೈಬಿಟ್ಟ ಸರ್ಕಾರ : ನೀವು ಮೊದಲು ಈ ಕೆಲಸ ಮಾಡಿ



















