ನವದೆಹಲಿ: ಶತ್ರುವಿನ ಶತ್ರು ಮಿತ್ರ ಎಂಬಂತೆ, ಭಾರತದ ಆಯ್ದ ಸರಕುಗಳ ಮೇಲೆ ಅಮೆರಿಕ ಶೇ.50ರಷ್ಟು ಸುಂಕ ವಿಧಿಸಿರುವುದನ್ನು ಚೀನಾ ಈಗ ತೀವ್ರವಾಗಿ ಖಂಡಿಸಿದ್ದು, ಈ ಸಂಕಷ್ಟದ ಸಮಯದಲ್ಲಿ ಭಾರತದೊಂದಿಗೆ ದೃಢವಾಗಿ ನಿಲ್ಲುವುದಾಗಿ ಘೋಷಿಸಿದೆ. ಅಮೆರಿಕವನ್ನು ‘ದಬ್ಬಾಳಿಕೆಕೋರ’ ಎಂದು ಜರಿದಿರುವ ಚೀನಾ, ಭಾರತ ಮತ್ತು ತಾನು ಏಷ್ಯಾದ ‘ಡಬಲ್ ಇಂಜಿನ್’ಗಳಿದ್ದಂತೆ ಎಂದು ಬಣ್ಣಿಸಿದೆ.
ಭಾರತದಲ್ಲಿನ ಚೀನಾ ರಾಯಭಾರಿ ಕ್ಸು ಫೀಹಾಂಗ್ ಅವರು ಗುರುವಾರ ಈ ಕುರಿತು ಮಾತನಾಡಿದ್ದು, “ಅಮೆರಿಕವು ದೀರ್ಘಕಾಲದಿಂದ ಮುಕ್ತ ವ್ಯಾಪಾರದಿಂದ ಲಾಭ ಗಳಿಸಿದೆ. ಆದರೆ ಈಗ ಸುಂಕಗಳನ್ನು ತನ್ನ ಚೌಕಾಸಿಯ ಅಸ್ತ್ರವಾಗಿ ಬಳಸುತ್ತಿದೆ. ಭಾರತದ ಮೇಲೆ ಶೇ.50ರಷ್ಟು ಸುಂಕ ಹೇರಿರುವುದನ್ನು ನಾವು ವಿರೋಧಿಸುತ್ತೇವೆ. ಇಂತಹ ಸಂದರ್ಭದಲ್ಲಿ ಮೌನವಾಗಿರುವುದು ದಬ್ಬಾಳಿಕೆಕೋರನಿಗೆ ಮತ್ತಷ್ಟು ಉತ್ತೇಜನ ನೀಡಿದಂತೆ. ಈ ವಿಚಾರದಲ್ಲಿ ಚೀನಾವು ಭಾರತದ ಜೊತೆ ದೃಢವಾಗಿ ನಿಲ್ಲಲಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
ದ್ವಿಪಕ್ಷೀಯ ವಾಣಿಜ್ಯ ಸಂಬಂಧಗಳ ಬಗ್ಗೆ ಮಾತನಾಡಿದ ಅವರು, ಭಾರತೀಯ ಸರಕುಗಳಿಗೆ ಚೀನಾದ ಮಾರುಕಟ್ಟೆಯನ್ನು ತೆರೆಯಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. “ಹೆಚ್ಚಿನ ಭಾರತೀಯ ಸರಕುಗಳು ಚೀನಾದ ಮಾರುಕಟ್ಟೆ ಪ್ರವೇಶಿಸುವುದನ್ನು ನಾವು ಸ್ವಾಗತಿಸುತ್ತೇವೆ. ಭಾರತವು ಐಟಿ, ಸಾಫ್ಟ್‌ವೇರ್ ಮತ್ತು ಬಯೋಮೆಡಿಸಿನ್ ಕ್ಷೇತ್ರಗಳಲ್ಲಿ ಸ್ಪರ್ಧಾತ್ಮಕ ಶಕ್ತಿಯನ್ನು ಹೊಂದಿದೆ. ಹಾಗೆಯೇ, ಚೀನಾ ಎಲೆಕ್ಟ್ರಾನಿಕ್ ಉತ್ಪಾದನೆ, ಮೂಲಸೌಕರ್ಯ ನಿರ್ಮಾಣ ಮತ್ತು ಹೊಸ ಇಂಧನ ಕ್ಷೇತ್ರಗಳಲ್ಲಿ ವೇಗವಾಗಿ ವಿಸ್ತರಿಸುತ್ತಿದೆ. ಈ ಎರಡು ಪ್ರಮುಖ ಮಾರುಕಟ್ಟೆಗಳು ಒಂದಾದರೆ, ಅದರ ಪರಿಣಾಮವನ್ನು ಊಹಿಸಿಕೊಳ್ಳಿ,” ಎಂದು ಹೇಳುವ ಮೂಲಕ ಅವರು ಅಮೆರಿಕಕ್ಕೆ ಸ್ಪಷ್ಟ ಸಂದೇಶ ರವಾಸಿದ್ದಾರೆ.
ಇದೇ ವೇಳೆ, ಚೀನಾದಲ್ಲಿ ಹೂಡಿಕೆ ಮಾಡಲು ಭಾರತೀಯ ಉದ್ಯಮಗಳನ್ನು ಆಹ್ವಾನಿಸಿದ ಅವರು, ಭಾರತದಲ್ಲಿರುವ ಚೀನೀ ಕಂಪನಿಗಳಿಗೆ ನ್ಯಾಯಯುತ, ನಿಷ್ಪಕ್ಷ ಮತ್ತು ತಾರತಮ್ಯರಹಿತ ವ್ಯವಹಾರದ ವಾತಾವರಣವನ್ನು ಒದಗಿಸಬೇಕೆಂದು ಮನವಿ ಮಾಡಿದ್ದಾರೆ.
ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದನ್ನೇ ದೊಡ್ಡ ತಪ್ಪೆಂದು ಬಿಂಬಿಸಿ ಅಮೆರಿಕವು ಭಾರತದ ಮೇಲೆ ಹೆಚ್ಚುವರಿ ಸುಂಕ ಹೇರುವ ಕ್ರಮ ಕೈಗೊಂಡಿದೆ. ಶೇ.25ರಷ್ಟು ವ್ಯಾಪಾರ ಸುಂಕ ಮತ್ತು ಹೆಚ್ಚುವರಿಯಾಗಿ ಶೇ.25ರಷ್ಟು ದಂಡವನ್ನು ಸೇರಿಸಿ ಒಟ್ಟು ಶೇ.50ರಷ್ಟು ಸುಂಕವನ್ನು ಭಾರತದ ಮೇಲೆ ಟ್ರಂಪ್ ವಿಧಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತವು ರಷ್ಯಾ-ಉಕ್ರೇನ್ ಯುದ್ಧಕ್ಕೆ ಪರೋಕ್ಷವಾಗಿ ಹಣಕಾಸು ನೆರವು ನೀಡುತ್ತಿದೆ ಎಂಬುದು ಅಮೆರಿಕದ ಆರೋಪವಾಗಿದೆ. ಈ ಹೊಸ ಸುಂಕಗಳು ಇದೇ ಆಗಸ್ಟ್ 27 ರಿಂದ ಜಾರಿಗೆ ಬರಲಿವೆ.



















